ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಭಾವಿ 'ಕೈ' ಮುಖಂಡ ಜೆಡಿಎಸ್ ಸೇರ್ಪಡೆ..!!
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡರು. ಲೂಟಿ ಹೊಡೆಯುವವರಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಜೆಪಿನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡ ಪ್ರಕಭಾಕರ್ ರೆಡ್ಡಿ ಅವರಿಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟರಿಗೆ ರಾಜ್ಯ ಸರ್ಕಾರದಲ್ಲಿ ರಕ್ಷಣೆ ಸಿಗುತ್ತಿದೆಯೇ ಹೊರತು ನಿಷ್ಠಾವಂತರಿಗೆ ರಕ್ಷಣೆ ಸಿಗುತ್ತಿಲ್ಲ ಎಂದರು.
ನೈಸ್ ಸಂಸ್ಥೆ ಅವ್ಯವಹಾರ ಸಂಬಂಧ ಸದನ ಸಮಿತಿ ನೀಡಿದ ವರದಿ ಕೋಲ್ಡ್ ಸ್ಟೋರೇಜ್‍ನಲ್ಲಿ ಬಿದ್ದಿದೆ ಎಂದು ಟೀಕಿಸಿದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಬಿಎಂಐಸಿ ಯೋಜನೆಯ ಅವ್ಯವಹಾರ ಆರೋಪ ಸಂಬಂಧ ತನಿಖೆ ನಡೆಸಿ ಈಗಾಗಲೇ ವರದಿ ನೀಡಿದೆ. ಆ ವರದಿ ಆಧರಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮುಖ್ಯಮಂತ್ರಿಗೆ ನೈತಿಕತೆ ಇಲ್ಲ. ಬಿಜೆಪಿ ಸೇರಿದಂತೆ ಇತರೆ ಪಕ್ಷದ ಮುಖಂಡರನ್ನು ಅವರು ಹೇಗೆ ಟೀಕೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವ ಸಿದ್ದರಾಮಯ್ಯನವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಹೇಳಿದರು. ಜೆಡಿಎಸ್‍ಗೆ ವಾಪಸ್ಸಾದ ಪ್ರಭಾಕರ್ ರೆಡ್ಡಿ ಅವರನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ತೀರ್ಮಾನಿಸಿರುವುದಾಗಿ ಅವರು ಪ್ರಕಟಿಸಿದರು.
Comments