ಪದ್ಮಾವತಿಗೆ ಸೆಡ್ಡು ಹೊಡೆಯಲು ಎಚ್ ಡಿಕೆ ಮಾಸ್ಟರ್ ಪ್ಲಾನ್..!!
ಎಐಸಿಸಿ ಸಾಮಾಜಿಕ ತಾಣದ ಉಸ್ತುವಾರಿ ಪದ್ಮಾವತಿ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ವಿರುದ್ದ ಸ್ಪರ್ಧಿಸಲು ಸರಕಾರೀ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯೊಬ್ಬರು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಐಆರ್ಎಸ್ (ಇಂಡಿಯನ್ ರೆವೆನ್ಯೂ ಸರ್ವಿಸ್) ಅಧಿಕಾರಿಯಾಗಿರುವ ಲಕ್ಷ್ಮೀ ಅಶ್ವಿನ್ ಗೌಡ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಮಂಡ್ಯದ ಭಾಗದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿಗೆ ಪುಷ್ಟಿ ನೀಡುವಂತೆ ಲಕ್ಷ್ಮೀ ಅಶ್ವಿನ್ ಗೌಡ ತನ್ನ ಸರಕಾರೀ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಮಂಡ್ಯದಿಂದ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಿದ್ದ ಲಕ್ಷ್ಮೀ ಅಶ್ವಿನ್ ಗೌಡ, ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಹೌದು. ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಕುಮಾರಣ್ಣನವರನ್ನು ಕೇಳಿ, ನಾನೇ ಮುಂದೆ ನಿಮಗೆ ಉತ್ತರ ನೀಡುತ್ತೇನೆಂದು ಲಕ್ಷ್ಮೀ ಅಶ್ವಿನ್ ಗೌಡ ಹೇಳಿದ್ದಾರೆ.
ಗೌಡರ ಕುಟುಂಬದ ಜೊತೆ ಹಿಂದಿನಿಂದಲೂ ಸಂಪರ್ಕದಲ್ಲಿರುವ ಲಕ್ಷ್ಮೀ ಅಶ್ವಿನ್ ಗೌಡ, ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಪಕ್ಷದ ಕುಮಾರಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಮ್ಯಾ ಅವರನ್ನು ಒಂದು ವೇಳೆ ಕಾಂಗ್ರೆಸ್ ಕಣಕ್ಕಿಳಿಸಿದರೆ, ಪ್ರಭಲ ಮಹಿಳಾ ಅಭ್ಯರ್ಥಿಯಾಗಿ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ನಿಲ್ಲಿಸಲು ಕುಮಾರಸ್ವಾಮಿ ರಣತಂತ್ರ ರೂಪಿಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಮಂಡ್ಯದಲ್ಲಿ ನಿರ್ಣಾಯಕವಾಗಿರುವುದು ಒಕ್ಕಲಿಗ ಮತಬ್ಯಾಂಕ್. ಒಂದು ವೇಳೆ ರಮ್ಯಾ ಸ್ಪರ್ಧಿಸುವುದೇ ಅಂತಿಮವಾದರೆ, ಒಕ್ಕಲಿಗ ಸಮುದಾಯದ ಅದರಲ್ಲೂ ಮಹಿಳೆಯರನ್ನೇ ಕಣಕ್ಕಿಳಿಸಿದರೆ, ಪ್ರಭಲ ಪೈಪೋಟಿ ನೀಡಿ ಕ್ಷೇತ್ರವನ್ನು ಗೆಲ್ಲಬಹುದು ಎನ್ನುವುದು ಕುಮಾರಸ್ವಾಮಿ ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.
Comments