ಕುಮಾರಪರ್ವದ ಬಗ್ಗೆ ಲೇವಡಿ ಮಾಡಿರುವ ರಾಷ್ಟ್ರೀಯ ಪಕ್ಷಗಳಿಗೆ ಚಾಟಿ ಏಟು ಕೊಟ್ಟ ಕುಮಾರಣ್ಣ

ಕುಮಾರಪರ್ವ ಕಾರ್ಯಕ್ರಮವನ್ನು ಲೇವಡಿ ಮಾಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಾಟಿ ಏಟು ನೀಡಿದ್ದಾರೆ. ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಕುಮಾರಪರ್ವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇವೇಗೌಡರು ಮಣ್ಣಿನಮಗ, ಕುಮಾರಸ್ವಾಮಿ ರೈತನ ಮಗ ಆದರೆ, ನಾನು ಯಾರ ಮಗ ಅಂತ ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ ಕಮೀಷನ್ ತೆಗೆದುಕೊಳ್ಳುವ ಮಗ ಎಂದು ಕುಮಾರಸ್ವಾಮಿ ಟೀಕಿಸಿದರು. ಕುಮಾರಪರ್ವ ಪಂಚರ್ ಆಗಿದೆ ಎಂದು ಬಿಜೆಪಿ ನಾಯಕ ಅನಂತ್‍ಕುಮಾರ್ ಲೇವಡಿ ಮಾಡಿದ್ದಾರೆ. ಆದರೆ, ನನ್ನ ಬಸ್ ಟೈರ್ ಪಂಚರ್ ಮಾಡೋಕೆ ಈ ನಾಡಿನ ಜನ ಬಿಡಲ್ಲ. ಯಾರನ್ನು ಪಂಚರ್ ಮಾಡಬೇಕೆಂದು ಜನ ತೀರ್ಮಾನಿಸಿದ್ದು, ಇನ್ನು ಮೂರು ತಿಂಗಳು ಕಾಯಿರಿ ಎಂದು ತಿರುಗೇಟು ನೀಡಿದರು. ನಾನು ಇಸ್ರೇಲ್ ಗೆ ಹೋಗಿದ್ದರ ಬಗ್ಗೆ ಸಿಎಂ ಟೀಕಿಸಿದ್ದಾರೆ. ಬಿಜೆಪಿ ನಾಯಕರನ್ನು ಟೀಕಿಸಿದಂತೆ ನನ್ನ ಬಗ್ಗೆ ಲಘುವಾಗಿ ಮಾತನಾಡಬೇಡಿ. ಈ ನಾಡಿನ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ನಾನು ಇಸ್ರೆಲ್‍ಗೆ ಹೋಗಿದ್ದು ಮೋಜು, ಮಸ್ತಿಗಾಗಿ ಅಲ್ಲ. ಅಲ್ಲಿನ ರೈತರ ಬಗ್ಗೆ ಅಧ್ಯಯನ ಮಾಡಲು ಎಂದು ಕುಮಾರಸ್ವಾಮಿ ಹೇಳಿದರು. ಸಕ್ಕರೆ ನಾಡು, ಭತ್ತದ ಬೀಡೆಂಬ ಖ್ಯಾತಿಯಿದ್ದ ಮಂಡ್ಯವನ್ನು ಹುರುಳಿ ನಾಡು ಮಾಡಿದ್ದಾರೆ. ಭತ್ತ, ಕಬ್ಬು ಬೆಳೆಯದಂತೆ ಆದೇಶ ಮಾಡಿ ಡಂಗೂರ ಭಾರಿಸಿದ್ದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮಂಡ್ಯ ಜಿಲ್ಲೆಯೂ ಭರ ಪೀಡಿತವಾಗಿದೆ ಎಂದು ಆರೋಪಿಸಿದರು.
ಸಿಎಂ ಅಂದರೆ ರಾಜನ ಮಗ ಅಲ್ಲ. ಅವನು ನಿಮ್ಮೆಲ್ಲರ ಸೇವೆ ಮಾಡೋ ಗುಲಾಮ. ಸಿಎಂ ಆದ ಕಾರಣಕ್ಕೆ ಮೆರೆಯಬಾರದು. ನಾನು ಮರು ಜನ್ಮವೆತ್ತಿ ಬಂದಿದ್ದೇನೆ. ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದರೂ ಜನರ ಒಳಿತಿಗಾಗಿ ಎಲ್ಲಾ ಕ್ಷೇತ್ರ ಸುತ್ತುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯ ಸರಕಾರ ಸಹಕಾರ ಸಂಘಗಳ 50 ಸಾವಿರ ಸಾಲ ಮನ್ನಾ ಘೋಷಣೆ ಮಾಡಿದ್ದರೂ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ. ಆದರೆ, ನನ್ನ ಅವಧಿಯಲ್ಲಿ ಸಾಲಮನ್ನಾ ಮಾಡಿದ ಹಣವನ್ನು 20 ದಿನದಲ್ಲಿ ರೈತರ ಖಾತೆಗೆ ಹಣ ಜಮೆ ಮಾಡಿದ್ದೆ. ಅಧಿಕಾರಕ್ಕೆ ತಂದರೆ ರಾಷ್ಟ್ರೀಕೃತ ಬ್ಯಾಂಕ್‍ನ ರೈತರ ಎಲ್ಲಾ ಸಾಲಮನ್ನಾ ಮಾಡುವೆ ಎಂದು ಅವರು ಪುನುರುಚ್ಚರಿಸಿದರು. ಸಂಸದ ಸಿಎ.ಎಸ್.ಪುಟ್ಟರಾಜು, ಸ್ಥಳೀಯ ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಸಚಿವ ಎಚ್.ವಿಶ್ವನಾಥ್, ಎಂಎಲ್‍ಸಿ ಎನ್.ಅಪ್ಪಾಜಿಗೌಡ, ಮಾಜಿ ಶಾಸಕರಾದ ಬಿ.ಪ್ರಕಾಶ್, ಕೆ.ಸುರೇಶ್‍ಗೌಡ, ಎಲ್.ಆರ್.ಶಿವರಾಮೇಗೌಡ, ಎಂ.ಶ್ರೀನಿವಾಸ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ಜಿಪಂ ಸದಸ್ಯ ಬಿ.ಎಲ್.ದೇವರಾಜು, ಎಚ್.ಟಿ.ಮಂಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಇದೇ ವೇಳೆ ಡಾ.ಅಶ್ವಿನ್‍ಗೌಡ ಅವರನ್ನು ಶ್ಲಾಘಿಸಿದ ಕುಮಾರಸ್ವಾಮಿ, ನಾಗಮಂಗಲದಲ್ಲಿ ಕೆ.ಸುರೇಶ್‍ಗೌಡರಿಗಾಗಿ ಅಶ್ವಿನ್ ತ್ಯಾಗ ಮಾಡಿದ್ದಾರೆ ಎಂದು ನಾಗಮಂಗಲಕ್ಕೆ ಸುರೇಶ್‍ಗೌಡರಿಗೆ ಟಿಕೆಟ್ ಖಾತ್ರಿ ಎಂಬುದನ್ನು ಸ್ಪಷ್ಟಪಡಿಸಿದರು.
Comments