ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೆಡ್ಡು ಹೊಡೆಯಲು ಮುಂದಾದ ಜೆಡಿಎಸ್

ಜೆಡಿಎಸ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ಅಲ್ಲದೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಲಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ.ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೆಡ್ಡು ಹೊಡೆಯಲು ಮಾರ್ಚ್ 6 ರಿಂದ ಜೆಡಿಎಸ್ ಒಂದು ತಿಂಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದೆ.
ಬಿಬಿಎಂಪಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಹಗರಣ, ನಂತರ ಕಾಂಗ್ರೆಸ್ ಅಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ವೈಫಲ್ಯಗಳ ಬಗ್ಗೆ ಕರಪತ್ರ ಹಂಚುವ ಮೂಲಕ ಜನಜಾಗೃತಿ ಮೂಡಿಸಲು ಮುಂದಾಗಿದೆ. ಮಾರ್ಚ್ 6 ರಂದು ಬಸವನಗುಡಿಯ ದೊಡ್ಡಗಣೇಶ ದೇವಾಲಯದಿಂದ ಪಾದಯಾತ್ರೆ ಆರಂಭವಾಗಲಿದ್ದು 17 ರವರೆಗೂ ಮುಂದುವರಿಯಲಿದೆ. ನಂತರ ಯುಗಾದಿ ಹಬ್ಬದ ಪ್ರಯುಕ್ತ ಎರಡು ದಿನ ಬಿಡುವು ನೀಡಿ ಮತ್ತೆ ಪ್ರಾರಂಭವಾಗಲಿದೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ನೈಟ್ ಟೆಂಡರ್, ಕಡತಗಳಿಗೆ ಬೆಂಕಿ ಬಿದ್ದ ಪ್ರಕರಣ, ಡಿ ನೋಟಿಫಿಕೇಷನ್, ಕಾಂಗ್ರೆಸ್ ಅವಧಿಯಲ್ಲಿನ ಭ್ರಷ್ಟಾಚಾರ ಎಲ್ಲವನ್ನೂ ಜನರ ಮುಂದಿಡಲಿದ್ದೇವೆ. ಬೆಂಗಳೂರು ನಗರದ ಅಭಿವೃದ್ಧಿಗಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಮಾಡಿರುವ ಕೆಲಸಗಳನ್ನು ತಿಳಿಸಲಿದ್ದೇವೆ ಎಂದು ಹೇಳಿದ್ದಾರೆ.
Comments