'ಕೈ' ಬಿಡಿಸಿಕೊಂಡು 'ತೆನೆ' ಹೊರಲು ಸಜ್ಜಾದ ಪ್ರಭಾವಿ ಶಾಸಕ..!!



ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಗರಿಗೆದರಿರುವ ರಾಜಕೀಯ ಪಕ್ಷಗಳು. ಆಯಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು, ಮಾಜಿ ಶಾಸಕರೇ ಜನತೆಯ ಕೇಂದ್ರ ಬಿಂದು ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಶಾಸಕ ಸ್ಥಾನದ ಆಕಾಂಕ್ಷಿಗಳು ತಮಗೆ ಸೂಕ್ತ ಸ್ಥಾನಮಾನ ನೀಡುವ ಪಕ್ಷದಲ್ಲಿ ಗುರುತಿಸಿಕೊಳ್ಳಲು ಹಾತೊರೆಯುತ್ತಾರೆ. ಎರಡೆರಡು ಬಾರಿ ಕಾಂಗ್ರೆಸ್‌ಗೆ ಕೈ ಕೊಡಲು ಮುಂದಾಗಿ ನಂತರ ಹಿರಿಯರ ಸಂಧಾನದ ಫಲವಾಗಿ ಪಕ್ಷದಲ್ಲೇ ಉಳಿದುಕೊಂಡಿರುವ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರ ಹೊಸ ನಡೆ ಕಾಂಗ್ರೆಸ್‌ಗೆ ಕೈ ಕೊಡುವ ಮುನ್ಸೂಚನೆ ಎಂಬ ಅನುಮಾನ ಮೂಡಿಸಿದೆ.
ಈಗ ಕಲಬುರ್ಗಿ ಜಿಲ್ಲೆಯ ರಾಜಕೀಯ ನಾಯಕರ ವಿಷಯವನ್ನು ನೋಡುವುದಾದರೆ, ಇಲ್ಲಿನ ಅಫ್ಜಲ್ಪುರದ ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೇದಾರ್ ತರಾತುರಿಯಲ್ಲಿ ಜೆಡಿಎಸ್ ನ ಸೇರಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಜೆಡಿಎಸ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಬಹಿರಂಗವಾಗಿಯೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪಟ್ಟಣದ ಹಲವೆಡೆ ದೇವೇಗೌಡರು ಹಾಗೂ ಗುತ್ತೇದಾರ್ ಅವರ ಭಾವಚಿತ್ರಗಳುಳ್ಳ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು ಫ್ಲೆಕ್ಸ್‌ನಲ್ಲಿ '22 ವರ್ಷಗಳ ನಂತರ ನಗರಕ್ಕೆ ಆಗಮಿಸುತ್ತಿರುವ ಮಣ್ಣಿನ ಮಗ, ರಾಜ್ಯದ ಏಕೈಕ ಪ್ರಧಾನಿ, ಮುತ್ಸದಿ ರಾಜಕಾರಣಿ, ರೈತರ ಕಣ್ಮಣಿ, ಏತ ನೀರಾವರಿಗೆ ಅನುದಾನ ನೀಡಿದ್ದ ದೇವೇಗೌಡರಿಗೆ ಮಾಲೀಕಯ್ಯ ಗುತ್ತೇದಾರ್ ಮತ್ತು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಂದ ಸ್ವಾಗತ' ಎಂದು ಬರೆಯಲಾಗಿದೆ. ಮಾಲೀಕಯ್ಯ ಗುತ್ತೇದಾರ್ ಅಫ್ಜಲ್ಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದಾರೆ. ಆದರೆ ತಮ್ಮ ಸ್ವಪಕ್ಷದವರಿಂದಲೇ ಸಚಿವನಾಗುವ ಯೋಗ ತಪ್ಪಿದೆ ಎಂದು ಹಲವು ಬಾರಿ ಬಹಿರಂಗವಾಗಿಯೇ ಗುತ್ತೇದಾರ್ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಪಕ್ಷ ಬಿಡಲಿದ್ದಾರೆಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಈಗ ವಿಧಾನಸಭಾ ಚುನಾವಣೆ ಎದುರಾಗಿರುವ ಸಮಯದಲ್ಲಿ ಹೈ-ಕರ್ನಾಟಕ ಭಾಗದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಹಿಗ್ಗಿಸಿಕೊಳ್ಳಲು ವಿಶೇಷ ಆಸಕ್ತಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡರ ಗಾಳಕ್ಕೆ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಿಕ್ಕಿದ್ದಾರೆ ಎಂದು ಕ್ಷೇತ್ರದ ಜನತೆಯ ಲೆಕ್ಕಾಚಾರವಾಗಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಅಸಮಾಧಾನಗೊಂಡಿದ್ದು, ಗುತ್ತೇದಾರ್ ಜೆಡಿಎಸ್ ನತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments