ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಗಿಮಿಕ್ ಗಳು ನಡೆಯಲ್ಲ: ಎಚ್ ಡಿಕೆ
ಯಾದಗರಿಯ ಶಹಾಪುರ ತಾಲ್ಲೂಕಿನ ಭೀಮರಾನಗುಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯದಲ್ಲಿನ ಮಠ, ಮಂದಿರ, ಮಸೀದಿಗಳಿಗೆ ಭೇಟಿ ಕೊಟ್ಟು ಜನರ ಭಾವನೆಗಳನ್ನು ಕೆರಳಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ಸೋಗಲಾಡಿತನ ರಾಜ್ಯದ ಜನರಿಗೆ ಗೊತ್ತಿಲ್ಲ ಅಂದುಕೊಂಡಿದ್ದಾರೆ. ಕನ್ನಡಿಗರು ಅಷ್ಟೊಂದು ಮೂರ್ಖರಲ್ಲ ಎಂಬುದನ್ನು ಈಗಿನ ಚುನಾವಣೆ ನಿರ್ಧರಿಸಲಿದೆ' ಎಂದು ಕುಟುಕಿದ್ದಾರೆ.
'ರಾಜ್ಯದಲ್ಲಿ ಈ ಭಾರಿ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬಂದೇ ಬರುವ ವಿಶ್ವಾಸ ವ್ಯಕ್ತಪಡಿಸಿದ ಅವರು ರಾಷ್ಟ್ರೀಯ ಪಕ್ಷಗಳ ಗೋಸುಂಬೆ ತನ ರಾಜ್ಯದ ಜನಕ್ಕೆ ಅರ್ಥವಾಗಿದೆ ಅವರಿಗೆ ಅಭಿವೃದ್ಧಿ ಅಷ್ಟೆ ಬೇಕಿದೆ' ಎಂದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನಿ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಮಿತ್ ಶಾ ಹೇಳುತ್ತಾರೆ. ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ನೀಡಿ ನಾವು ಬಗೆಹರಿಸುತ್ತೇವೆ ಎಂಬುದಾಗಿ ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಇವರಿಗೆ ಮಹದಾಯಿ ಒಂದು ಅಂತರರಾಜ್ಯ ಸಮಸ್ಯೆ ಎಂಬುದು ಗೊತ್ತಿಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಅಂತರರಾಜ್ಯ ಸಮಸ್ಯೆಗಳನ್ನು ಕೇಂದ್ರ ಮಧ್ಯೆ ಪ್ರವೇಶಿಸಿ ಬಗೆಹರಿಸುವುದು ಸಾಂವಿಧಾನಿಕ ನಿಯಮ ಇದೆ. ಇದು ದೇಶದ ಎಲ್ಲರಿಗೂ ಗೊತ್ತಿರುವ ವಿಷಯ. ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಅವರು ಮಹದಾಯಿ ವಿಚಾರದಲ್ಲಿ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.'ಮುಷ್ಠಿ ಅಕ್ಕಿ' ಎಂಬುದು ಬಿಜೆಪಿಯ ಗಿಮಿಕ್ ಎಂದ ಕುಮಾರಸ್ವಾಮಿ ಅವರು ‘ಸಾಲಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆ ತಡೆಗಟ್ಟುವ ಬದಲು ರೈತರ ಮನೆಯಿಂದ ಮುಷ್ಟಿ ಅಕ್ಕಿ ಸಂಗ್ರಹಿಸಿ ರೈತರೊಂದಿಗೆ ಊಟ ಮಾಡಲು ನಿರ್ಧರಿಸುವ ಬಿಜೆಪಿಯದು ಚುನಾವಣಾ ಗಿಮಿಕ್' ಎಂದರು.ಬಿಎಸ್‌ಪಿ ಪಕ್ಷಕ್ಕೆ 20 ಟಿಕೆಟ್ ಕೊಡಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ ಅವರು 'ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ಕಟ್ಟುವ ಉದ್ದೇಶದಿಂದ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ' ಎಂದರು.
Comments