ರಾಷ್ಟ್ರೀಯ ಪಕ್ಷಗಳು ಕೈಗೊಂಡಿರುವ ರಾಜ್ಯದ ಅಭಿವೃದ್ಧಿಯ ಬಗ್ಗೆ ಹಿಗ್ಗಮುಗ್ಗ ಜಾಡಿಸಿದ ಎಚ್ ಡಿಕೆ

ಎರಡೂ ರಾಷ್ಟ್ರೀಯ ಪಕ್ಷಗಳು ಪರ್ಸೆಂಟೇಜ್ ಸರ್ಕಾರಗಳಾಗಿವೆ. ಈ ಪಕ್ಷಗಳ ನಾಯಕರು ಕೂಡ ಒಬ್ಬರನ್ನೊಬ್ಬರು ತೆಗಳಲು ರಾಜ್ಯದಲ್ಲಿ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದಾರೆ ಹೊರತು ಯಾರೊಬ್ಬರು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿಯವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಮಾಡುತ್ತಿವೆ. ಈ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಕೂಡ ಭೇಟಿ ನೀಡಿ ಭಾಷಣ ಮಾಡುತ್ತಿದ್ದಾರೆ. ಆದರೆ ಯಾವೊಬ್ಬ ನಾಯಕರ ಭಾಷಣದಲ್ಲೂ ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಇಲ್ಲ. ಬರೀ ಆರೋಪ ಮಾಡುವುದೇ ಭಾಷಣವಾಗಿದೆ ಎಂದಿದ್ದಾರೆ.ಮೋದಿ ಎರಡು ಬಾರಿ ರಾಜ್ಯದಲ್ಲಿ ಭಾಷಣ ಮಾಡಿದ್ದಾರೆ. ಅವರು ರಾಜ್ಯಕ್ಕೆ ಕೇಂದ್ರ ನೀಡಿರುವ ಕೊಡುಗೆ ಬಗ್ಗೆ ಮಾತನಾಡದೇ ರಾಹುಲ್ ಗಾಂಧಿ, ಸಿದ್ದರಾಮಯ್ಯನವರನ್ನು ತೆಗಳಲು ವೇದಿಕೆ ಉಪಯೋಗಿಸಿಕೊಂಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿಯವರು ಮೋದಿಯನ್ನು ತೆಗಳಲು ವೇದಿಕೆ ಸೃಷ್ಟಿಸಿಕೊಂಡಿದ್ದಾರೆ. ಆದರೆ ಇವರ ಮಂತ್ರದಂಡ ರಾಜ್ಯದಲ್ಲಿ ನಡೆಯುವುದಿಲ್ಲ ಎಂದರು.
ಇನ್ನು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎಚ್.ಡಿ.ಕುಮಾರಸ್ವಾಮಿ, ಕಲಾಪಗಳಲ್ಲಿ ಸಿಎಂ ಭಾಷಣ ಮಾಡುವುದು ಸುಬ್ಬರಾಯಕಟ್ಟೆ ಭಾಷಣದಂತಿರುತ್ತದೆ. ಅದಕ್ಕೆ ನಾನು ಬಜೆಟ್ ಸೇರಿದಂತೆ ಯಾವುದೇ ಕಲಾಪಗಳಲ್ಲಿಯೂ ಭಾಗವಹಿಸಿಲ್ಲ. ರಾಜ್ಯದಲ್ಲಿರುವ ಸಮಸ್ಯೆಗಳಿಗೆ ಸರ್ಕಾರ ಎಷ್ಟರ ಮಟ್ಟಿಗೆ ಬಗೆಹರಿಸಿದೆ ಎಂಬುದು ನನಗೆ ಗೊತ್ತಿದೆ. ಬಜೆಟ್ ಬಗ್ಗೆಯೂ ನನಗೆ ಅರಿವಿದೆ ಎಂದರು. ನಾನು ಸದನದಲ್ಲಿ ಭಾಗವಹಿಸದೇ ಇದ್ದರೂ ಅಲ್ಲಿನ ಚರ್ಚೆಗಳ ಬಗ್ಗೆ ಗಮನಹರಿಸಿದ್ದೇನೆ. ಈ ಕಾರಣದಿಂದಲೇ ನಾನು ವಿಧಾನಸಭೆಯಲ್ಲಿ ಭಾಗಿಯಾಗಿಲ್ಲ. ಯಾವುದೇ ಯೋಜನೆ ಪೂರ್ತಿ ಮಾಡದೆ ಸರ್ಕಾರ ಜನರ ತೆರಿಗೆ ಹಣದಲ್ಲಿ ಚುನಾವಣೆ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.ಮೊಹಮದ್ ನಲಪಾಡ್‌ಗೆ ಕಾರಾಗೃಹದಲ್ಲಿ ಹೈ ಫೈ ಟ್ರೀಟ್‌ಮೆಂಟ್ ಸಿಗುತ್ತಿರುವ ಹಿನ್ನೆಲೆಯ ಬಗ್ಗೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಇದರಲ್ಲಿ ಅಚ್ಚರಿ ಪಡುವ ವಿಚಾರ ಏನು ಇಲ್ಲ. ರಾಜ್ಯ ಸರ್ಕಾರ ಹಾಗೂ ಸಿದ್ದರಾಮಯ್ಯ ಆರೋಪಿ ಪರ ನಿಂತಿರುವುದರಿಂದ ರಾಯಲ್ ಟ್ರೀಟ್‌ಮೆಂಟ್ ಕೊಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಪೆಟ್ಟು ತಿಂದವರು ಬಲಾಡ್ಯರಾಗಿರುವುದರಿಂದ ನಲಪಾಡ್ ಅರೆಸ್ಟ್ ಆಗಿದ್ದಾನೆ. ವಿದ್ವತ್ ಕುಟುಂಬಕ್ಕೆ ಹಿರಿಯ ಪೊಲೀಸ್ ಹಾಗೂ ರಾಜಕಾರಣಿಗಳ ಜೊತೆ ಸಂಬಂಧ ಇರುವುದರಿಂದ ಪ್ರಕರಣ ನಡೆಯುತ್ತಿದೆ. ಅದೇ ಸಾಮಾನ್ಯ ಪ್ರಜೆಯಾಗಿದ್ದರೆ ನಲಪಾಡ್ ಅರೆಸ್ಟ್ ಆಗುತ್ತಿರಲಿಲ್ಲ ಎಂದಿದ್ದಾರೆ.
Comments