ಶಾಸಕ ಹಾರಿಸ್ ಪುತ್ರನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಚ್ ಡಿಕೆ..!!
ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಹಲ್ಲೆಗೊಳಗಾದ ಎಲ್ಲರನ್ನು ಬಿಜೆಪಿ ಕಾರ್ಯಕರ್ತರೆಂದು ಹೇಳುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲ್ಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಬಿಜೆಪಿ ಕಾರ್ಯಕರ್ತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಅವರ ಸಾಧನೆಗಳನ್ನು ಹೇಳಿಕೊಳ್ಳಲು ಏನೂ ಇಲ್ಲ. ಹೀಗಾಗಿ ಅವರು ಕ್ಷುಲ್ಲಕ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಗಂಭೀರ ವಿಚಾರಗಳ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಕೇವಲ ಕಾಲು ತಾಗಿದ ಕಾರಣಕ್ಕೆ ವಿದ್ವತ್ ಮೇಲೆ ಹಲ್ಲೆ ನಡೆಸಿಲ್ಲ. ಇದರ ಹಿಂದೆ ಕೋಟ್ಯಂತರ ರೂ.ಮೊತ್ತದ ಹಗರಣವಿದೆ. ಕಂಪ್ಯೂಟರ್ ಹ್ಯಾಕಿಂಗ್, ಬಿಟ್ ಕಾಯಿನ್, ಹವಾಲ ದಂಧೆಯ ಕರಾಳ ಮುಖವಿದ್ದು, ಆ ಸತ್ಯ ಬಹಿರಂಗವಾಗಲಿ ಎಂದು ಆಗ್ರಹಿಸಿದರು.ಮೊನ್ನೆ ಹಾರಿಸ್ ಪುತ್ರ, ನಾರಾಯಣಸ್ವಾಮಿ ಹೀಗೆ ಕಾಂಗ್ರೆಸ್ ನಾಯಕರ ಪುಂಡಾಟಿಕೆ ಮನಸ್ಥಿತಿ ಮಿತಿ ಮೀರಿದೆ. ಆದರೆ, ಈ ಪ್ರಕರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ದೂರಿದ ಅವರು, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
Comments