40 ದಿನ 1200 ಕಿ.ಮೀ ಏಕಾಂಗಿ ಕಾಲ್ನಡಿಗೆ !

20 Feb 2018 2:57 PM |
1730 Report

ಪರಿಸರ, ಪುರಾತನ ಕೋಟೆಗಳನ್ನು ಕಾಪಾಡುವುದು ಹಾಗೂ ಪರ್ವತಾರೋಹಣ, ಚಾರಣದ ಬಗ್ಗೆ ಪ್ರವಾಸಿಗರು, ಯುವ ಜನತೆಯನ್ನು ಸೆಳೆಯಲು ಇಲ್ಲೊಬ್ಬ ಯುವಕ ಬರೋಬ್ಬರಿ 40 ದಿನಗಳಲ್ಲಿ ಏಕಾಂಗಿಯಾಗಿ ಕಾಲ್ನಡಿಗೆಯ ಮೂಲಕ 1200 ಕಿ.ಮೀ. ಹೆಜ್ಜೆಹಾಕಿದ್ದಾನೆ.

ಕಾರವಾರ ತಾಲೂಕಿನ ಸಿದ್ದರ ಗ್ರಾಮದ ಸುಶಾಂತ ಮಧುಕರ ಅಣ್ವೇಕರ್ ಎಂಬ 28ರ ಹರೆಯದ ಈ ಯುವಕ ಸಹ್ಯಾದ್ರಿ ಪರ್ವತಗಳು ಉಳಿಯಬೇಕು. ಹಾಗೆಯೇ ಯುವಕರಲ್ಲಿ ಪರ್ವತಾರೋಹಣದ ಬಗ್ಗೆ ಆಸಕ್ತಿ ಮೂಡಿಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಜ.7ರಂದು ಗುಜರಾತ್ ಗಡಿಯಲ್ಲಿರುವ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಾಹ್ಲೆರಗಡದಿಂದ ಕಾಲ್ನಡಿಗೆ ಆರಂಭಿಸಿ ಪ್ರತಿದಿನ 30-40 ಕಿ.ಮೀ. ಕ್ರಮಿಸಿ 40 ದಿನಗಳಲ್ಲಿ ಕಾರವಾರ ತಲುಪಿದ್ದಾರೆ.

ಟ್ರಾನ್ಸ್ ಸಹ್ಯಾದ್ರಿ ಹೆಸರಿನಲ್ಲಿ 1200 ಕಿ.ಮೀ. ಕ್ರಮಿಸಿ ಬಂದಿರುವ ಈ ಸಾಹಸಿ ಮಹಾ ರಾಷ್ಟ್ರದ ಶಿವಾಜಿ ಮಹಾರಾಜರ ಕಾಲದಲ್ಲಿ ನಿರ್ಮಿತವಾದ 26 ಕೋಟೆಗಳಿಗೆ ಇದೇ ವೇಳೆ ಭೇಟಿ ನೀಡಿ ಪಾರಂಪರಿಕ ಕಟ್ಟಡಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. 'ನನಗೆ ಬಾಲ್ಯದಿಂದಲೇ ಪರ್ವತಾರೋಹಣದಲ್ಲಿ ಎಲ್ಲಿಲ್ಲದ ಆಸಕ್ತಿ. ಮೌಂಟ್‌ಎವರೆಸ್ಟ್ ಏರುವುದು ನನ್ನ ಹೆಬ್ಬಯಕೆ. ಅದಕ್ಕೆ ಅಗತ್ಯವಾದ ದೈಹಿಕ ಕ್ಷಮತೆ ಗಳಿಸಿಕೊಳ್ಳುವುದಕ್ಕೆ 1200 ಕಿ.ಮೀ. ಚಾರಣ ಮಾಡಿದೆ. ಆದರೆ ಇದು ಒಂದೇ ಉದ್ದೇಶಕ್ಕೆ ಸೀಮಿತವಾಗಬಾರದು ಎಂದುಕೊಂಡು ಯುವಕರಿಗೆ ಚಾರಣದ ಮಹತ್ವ ತಿಳಿಸುವುದು, ಪರ್ವತಗಳು, ಪಾರಂಪರಿಕ ಕಟ್ಟಡಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಕೈಗೊಂಡೆ' ಎನ್ನುತ್ತಾರೆ ಸುಶಾಂತ.

2500 ರುಪಾಯಿಯಲ್ಲಿ 1200 ಕಿ.ಮಿ: ಗುಡ್ಡಗಾಡು, ಸಹ್ಯಾದ್ರಿ ಪರ್ವತ, ಕೋಟೆ ಕೊತ್ತಲಗಳ ಮೂಲಕ ನಡಿಗೆಯಲ್ಲಿಯೇ 1200 ಕಿ.ಮೀ. ಪ್ರಯಾಣ ಮಾಡಿದ ಸುಶಾಂತ್ ಖರ್ಚು ಕೇವಲ 2500 ರು. ಅಗತ್ಯದ ವಸ್ತುಗಳನ್ನು ತನ್ನಲ್ಲಿಯೇ ಇಟ್ಟುಕೊಂಡು ಕಾಡಿನಲ್ಲಿ ಸಿಗುವ ಆಹಾರವನ್ನೇ ಅಧಿಕವಾಗಿ ಅವಲಂಭಿಸಿ ಪ್ರಯಾಣ ಪೂರ್ಣಗೊಳಿಸಿದ ಸುಶಾಂತ್ ಮುಂದೆ ಮೌಂಟ್ ಎವರೆಸ್ಟ್ಗೂ ಕೂಡ ಇದೇ ಮಾದರಿ ಅನುಸರಿಸುವುದಾಗಿ ಯೋಜನೆ ಹಾಕಿಕೊಂಡಿದ್ದಾರೆ.

 

Courtesy : Dailyhunt

Edited By

Yuva Morcha

Reported By

Yuva Morcha

Comments