ಸಚಿವ ಯು.ಟಿ.ಖಾದರ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ನಿಂದ ಪ್ರಭಾವಿ ಅಭ್ಯರ್ಥಿ ಅಖಾಡಕ್ಕೆ..!!

ಕರಾವಳಿಯಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಹಾಗೂ ಮುಸ್ಲಿಂ ಸಂಘಟನೆಗಳ ಓಕೂಟದ ಅಧ್ಯಕ್ಷ ಜೆಡಿಎಸ್ ಸೇರುತ್ತಿರುವುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಅಶ್ರಫ್ ಈಗಾಗಲೇ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಮಾಜಿ ಮೇಯರ್ ಹಾಗೂ ಮುಸ್ಲಿಂ ಸಂಘಟನೆಗಳ ಓಕೂಟದ ಅಧ್ಯಕ್ಷ ಅಶ್ರಫ್ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದಾರೆ. ಈ ನಡುವೆ ಇನ್ನೊಂದು ಮಾಹಿತಿಯ ಪ್ರಕಾರ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಯು.ಟಿ.ಖಾದರ್ ಅವರ ಎದುರು ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಮುಸ್ಲಿಂ ಸಂಘಟನೆಗಳ ಒಕೂಟದ ಅಧ್ಯಕ್ಷರೂ ಆಗಿರುವ ಅಶ್ರಫ್,ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ನಲ್ಲಿ ಇರುವಾಗಲೇ ರಾಜ್ಯ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದ್ದರು. ಅವರನ್ನು ಪಕ್ಷಕ್ಕೆ ಕರೆತಂದರೆ ಅಲ್ಪಸಂಖ್ಯಾತರ ಮತ ಪಡೆಯಬಹುದೆಂಬ ಯೋಚನೆ ಜೆಡಿಎಸ್ ವರಿಷ್ಠರದ್ದು.ಮೇಯರ್ ಆಗಿದ್ದ ಸಂದರ್ಭದಲ್ಲಿ ಅಶ್ರಫ್ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ಜನಬೆಂಬಲವನ್ನು ಅಶ್ರಫ್ ಗಳಿಸಿದ್ದಾರೆ. ಅಶ್ರಫ್ ಜೆಡಿಎಸ್ ಸೇರ್ಪಡೆಯಾಗುವುದರಿಂದ ಕಾಂಗ್ರೆಸ್ ಪಾಳಯಕ್ಕೆ ಮುಳುವಾಗಲಿದೆ. ಅಶ್ರಫ್ ಮಂಗಳೂರಿನಿಂದ ಸ್ಪರ್ಧಿಸಿದರೆ ಚುನಾವಣೆ ಚಿತ್ರಣವೇ ಬದಲಾಗಬಹುದು ಎಂದು ಮೂಲಗಳು ತಿಳಿಸಿವೆ.ಮುಸ್ಲಿಂ ಸಮುದಾಯದ ಮತಗಳು ವಿಭಜನೆಗೊಂಡರೆ ಮುಂಬರುವ ಚುನಾವಣೆಯಲ್ಲಿ ಯು.ಟಿ.ಖಾದರ್ ಅವರಿಗೆ ಭಾರೀ ಸಮಸ್ಯೆ ಎದುರಾಗಲಿದೆ.
Comments