ತಮ್ಮ ಕೊನೆಯ ಬಜೆಟ್ಟಿನಲ್ಲಿ ಚುನಾವಣಾ ದಾಳ ಉರುಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ



ತಮ್ಮ ಸರಕಾರದ ಕಟ್ಟಕಡೆಯ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಪರ ತಮಗಿರುವ ಒಲವನ್ನು ಮತ್ತೆ ತೋರಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆಯಾಗುವುದು ಬಾಕಿಯಿದೆ. ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯು ಎಲ್ಲ ಸಾಧ್ಯತೆಗಳೂ ಇರುವಾಗ ಸಿದ್ದರಾಮಯ್ಯನವರು ಬಜೆಟ್ಟಿನಲ್ಲಿ ಚುನಾವಣಾ ದಾಳ ಉರುಳಿಸಿದ್ದಾರೆ. ಮುಸ್ಲಿಂ ಸಮುದಾಯ, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರು, ಕ್ರೈಸ್ತ / ಸಿಖ್ ಸಮುದಾಯದವರಿಗೂ ಭರ್ಜರಿ ಬಳುವಳಿಗಳನ್ನು ನೀಡಿ ತಮ್ಮ ಚುನಾವಣಾ ಗೇಮ್ ಪ್ಲಾನ್ ಅನ್ನು ಚೆನ್ನಾಗಿ ಮಂಡಿಸಿದ್ದಾರೆ.
ಹಿಂದೂಗಳಿಗೆ ವಿಶೇಷವಾಗಿ ಏನನ್ನೂ ಸಿದ್ದರಾಮಯ್ಯ ನೀಡಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಅಡಿಯಲ್ಲಿ ಬಾಧಿತ 4,110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಸನ ಎಂದು 20 ಕೋಟಿ ರುಪಾಯಿ ಮೀಸಲಿಟ್ಟಿರುವುದು ಬಿಟ್ಟರೆ ಹಿಂದೂ ಎಂಬ ಪದವೇ ಇಡೀ ಬಜೆಟ್ಟಿನಲ್ಲಿ ಸಿಗುವುದಿಲ್ಲ.
ಮುಸ್ಲಿಂ ಶಿಕ್ಷಣ ಸಂಸ್ಥೆ ಮದರಸಾಗಳ ಆಧುನೀಕರಣ, ಶಿಕ್ಷಣ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ 15 ಕೋಟಿ ರೂ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ 15 ಕೋಟಿ ರೂ.ಗಳ ವೆಚ್ಚದಲ್ಲಿ ಮಹಿಳೆಯರಿಗೆ ಕಾರ್ಯಾರಂಭ (Start up) ಸಾಲ ಸೌಲಭ್ಯ ಯೋಜನೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವೃತ್ತಿ ಪ್ರೋತ್ಸಾಹ ಯೋಜನೆಯಡಿ ವಿವಿಧ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ನೀಡಲು 30 ಕೋಟಿ ರುಪಾಯಿಗಳ ಮೊತ್ತದ ಹೊಸ ಯೋಜನೆ. ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ರಜತ ಮಹೋತ್ಸವ ಅಂಗವಾಗಿ ಕಾರ್ಪಸ್ ಫಂಡ್‌ಗೆ 20 ಕೋಟಿ ರೂ. ಅನುದಾನ. ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 800 ಕೋಟಿ ರುಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀಸಲಿಟ್ಟಿದ್ದಾರೆ. ಕ್ರೈಸ್ತ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 200 ಕೋಟಿ ರೂ. ಜೈನ ಮತ್ತು ಸಿಖ್ ಸಮುದಾಯಗಳ ಅಭಿವೃದ್ಧಿಗಾಗಿ 80 ಕೋಟಿ ರೂ.
Comments