ಜೆಡಿಎಸ್‌ನಿಂದ ವಿನೂತನ ರೀತಿಯಲ್ಲಿ ಚುನಾವಣಾ ಪ್ರಚಾರ..!!
ಇನ್ನೇನು ಕೇವಲ ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯ ರಾಜಕಾರಣದಲ್ಲಿ ಈಗಾಗಲೇ ಬಿರುಸಿನ ಚುನಾವಣಾ ಪ್ರಚಾರ ನಡೆಯುತ್ತಿದೆ.ಜೆಡಿಎಸ್ ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ಚುನಾವಣಾ ಪ್ರಚಾರ ನಡೆಸುತ್ತಿದೆ. ಕೆಲ ಪಕ್ಷದ ಮುಖಂಡರು ಅಲ್ಲಲ್ಲಿ ಬ್ಯಾನರ್‌ಗಳನ್ನು ಕಟ್ಟಿ, ಕರಪತ್ರಗಳನ್ನು ಹಂಚುವ ಮೂಲಕ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಜೆಡಿಎಸ್ ಪಕ್ಷ ಕಾರ್ಟೂನ್ ಮೂಲಕ ಚುನಾವಣಾ ಪ್ರಚಾರಕ್ಕಿಳಿದಿದೆ.
ನವಲಗುಂದ ಕ್ಷೇತ್ರದ ಜೆಡಿಎಸ್ ಶಾಸಕ ಎನ್.ಹೆಚ್.ಕೋನರಡ್ಡಿ ಅವರು ಈ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅಪ್ಪ ಮತ್ತು ಮಗನ ಮಧ್ಯೆ ನಡೆಯುವ ಸಂಭಾಷಣೆ ಈ ಕಾರ್ಟೂನ್‌ನಲ್ಲಿದೆ. ಮಗ ಬಿಜೆಪಿಗೆ ಮತ ಹಾಕೋಣ ಎಂದರೆ, ಈಗಾಗಲೇ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಿದೆ, ಕೇಂದ್ರದಲ್ಲೂ ಅಧಿಕಾರದಲ್ಲಿದೆ. ಆದರೆ, ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಾಲ ಮನ್ನಾ ಮಾಡಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿಲ್ಲ. ಅದೇ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳುತ್ತಿದೆ. ಇದೊಂದು ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ನೋಡೋಣ ಎಂಬ ಸಂಭಾಷಣೆ ಈ ಕಾರ್ಟೂನ್‌ನಲ್ಲಿದೆ. ಈ ಕಾರ್ಟೂನ್ ಈಗಾಗಲೇ ಸಾಕಷ್ಟು ವೈರಲ್ ಆಗಿದ್ದು, ಎಲ್ಲರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
Comments