ಫೆ.12 ರಂದು ತೀರ್ಥಹಳ್ಳಿಯಲ್ಲಿ ಜೆಡಿಎಸ್ ಬೃಹತ್ ಸಮಾವೇಶ..!!



ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಫೆ.12ರಂದು ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ನಡೆಯಲಿದೆ. ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಯವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರ್.ಎಂ.ಮಂಜುನಾಥ ಗೌಡ ಅವರು ಈ ಕುರಿತು ಮಾಹಿತಿ ನೀಡಿದರು. ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಪಕ್ಷದಿಂದ ಐತಿಹಾಸಿಕ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಯವರು ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಫೆ.12 ರಂದು ಬೆಳಗ್ಗೆ 10.30ಕ್ಕೆ ಬಾಳೆಬೈಲಿನಿಂದ ಸುಮಾರು 5 ಸಾವಿರ ಬೈಕ್‌ಗಳಲ್ಲಿ ಸಾರ್ವಜನಿಕ ಕ್ರೀಡಾಂಗಣದವರೆಗೆ ಜಾಥಾ ನಡೆಯಲಿದೆ. ದೇವೇಗೌಡರು, ಕುಮಾರಸ್ವಾಮಿ ಯವರು, ಪಿ.ಜಿ.ಆರ್ ಸಿಂಧ್ಯಾ, ಮಧು ಬಂಗಾರಪ್ಪ, ವೈ.ಎಸ್.ವಿ.ದತ್ತಾ, ಫಾರೂಕ್, ಎಂ.ಜೆ.ಅಪ್ಪಾಜಿ, ಶಾರದಾ ಪೂರ್ಯಾನಾಯ್ಕ, ನಿರಂಜನ್ ಸೇರಿದಂತೆ ಹಲವು ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ' ಎಂದು ಮಂಜುನಾಥ ಗೌಡರು ಮಾಹಿತಿ ನೀಡಿದರು.ಸಮಾವೇಶದಲ್ಲಿ ಸುಮಾರು 35 ರಿಂದ 40 ಸಾವಿರ ಮಂದಿ ರೈತರು, ಯುವಕರು, ಮಹಿಳೆಯರು ಭಾಗವಹಿಸಲಿದ್ಧಾರೆ. ಇದು ಪಕ್ಷಕ್ಕೆ ದೊಡ್ಡ ಶಕ್ತಿಯಾಗಲಿದೆ. ಜೊತೆಗೆ ಅಕ್ಕಪಕ್ಕದ ಕ್ಷೇತ್ರಕ್ಕೂ ಸಂದೇಶ ರವಾನೆಯಾಗಬೇಕು ಎಂಬ ದೃಷ್ಟಿ ಇಟ್ಟುಕೊಂಡು ಸಮಾವೇಶ ನಡೆಸಲಾಗುತ್ತದೆ ಎಂದು ವಿವರಿಸಿದರು.
ಸಮಾವೇಶ ನಡೆಯುವುದಕ್ಕೂ ಮೊದಲು ಫೆ.11 ರ ಸಂಜೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೋಣಂದೂರು ಸಮೀಪದ ಮಲ್ಲಿಕಟ್ಟೆ ಗ್ರಾಮದ ರೈತರೊಬ್ಬರ ಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ' ಎಂದು ತಿಳಿಸಿದರು.ಜೆಡಿಎಸ್ ಜಿಲ್ಲಾ ಮುಖಂಡ ಮದನ್ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಆರ್.ಎಂ.ಮಂಜುನಾಥ ಗೌಡ, ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ. ಅವರಿಗೆ ರಾಜಕೀಯ ಶಕ್ತಿ ದೊರಕಿದರೆ ಇನ್ನಷ್ಟು ಜನರ ಸೇವೆ ಮಾಡಬಹುದು' ಎಂದರು.
Comments