ಮಡಿವಾಳ ಜನಜಾಗೃತಿ ಸಮಾವೇಶದಲ್ಲಿ ಎಚ್ ಡಿಕೆ ಕೊಟ್ಟ ಭರವಸೆ ಏನು ಗೊತ್ತಾ?
ಕರ್ನಾಟಕ ಪ್ರದೇಶ ಜಾತ್ಯತೀತ ಜನತಾ ದಳದ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಡಿವಾಳರ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ತನ್ನ ನೇತೃತ್ವದ ಸರಕಾರವನ್ನು ಅಸ್ತಿತ್ವಕ್ಕೆ ತಂದಲ್ಲಿ ದಲಿತರ ಮೀಸಲಾತಿಗೆ ದಕ್ಕೆಬಾರದಂತೆ ಮಡಿವಾಳರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಲು ಬದ್ದನಾಗಿದ್ದೇನೆ ಎಂದು ಅಭಯ ನೀಡಿದರು.
ಅಂಬೇಡ್ಕರ್ ರವರು ಮೀಸಲಾತಿಯ ಜತೆಗೆ ಮತದಾನದ ಹಕ್ಕನ್ನೂ ಕೊಟ್ಟಿದ್ದಾರೆ. ಮಡಿವಾಳ ಸಮುದಾಯ ಈ ಹಕ್ಕನ್ನು ಪ್ರಜ್ಞಾಪೂರಕವಾಗಿ ಬಳಸಬೇಕು. ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷಗಳನ್ನು ಬೆಂಬಲಿಸಬೇಕು. ಜತೆಗೆ ಸ್ಪಂದಿಸದ ಸರಕಾರಗಳನ್ನು ಪ್ರಶ್ನೆ ಮಾಡಬೇಕು ಎಂದ ಅವರು, ಎ.ಜೆ.ಸದಾಶಿವ ಆಯೋಗದ ವರದಿ ಬಗ್ಗೆ ಪರವಿರೊಧಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ. ಅಂಬೇಡ್ಕರ್ ಅವರು ಕಲ್ಪಿಸಿರುವ ಮೀಸಲಾತಿಯನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಮೀಸಲಾತಿ ಪಡೆದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಲು ಸಾಧ್ಯವಾಗಿದೆಯೇ ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.ಬಡವರು, ಸಮಾಜದ ಬಗ್ಗೆ ದೇವೇಗೌಡರಿಗೆ ಇರುವಷ್ಟು ಬದ್ದತೆ ಬೇರೆ ಯಾವ ರಾಜಕಾರಣಿಗೂ ಇಲ್ಲವೆಂದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಸಣ್ಣಪುಟ್ಟ ಸಮುದಾಯಗಳಿಗೂ ರಾಜಕೀಯ ಸ್ಥಾನಮಾನ ಸಿಗುವಂತೆ ಮಾಡಿರುವುದು ದೇವೇಗೌಡರ ಸಾಮಾಜಿಕ ಕಳಕಳಿಗೆ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.
ನನ್ನ ಹೃದಯದಲ್ಲಿ ಜಾತಿಯ ವ್ಯಾಮೋಹವಿಲ್ಲ. ನಾನು ಬಡವರಿಗೆ ಮಾಡಿರುವ ಸೇವೆಯಲ್ಲಿ ಸಾರ್ಥಕತೆಯಿದೆ. ಮಡಿವಾಳ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಜೆಡಿಎಸ್ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಭರವಸೆ ನೀಡಿದರು.ಮಾಜಿ ಸಚಿವರಾದ ಎಚ್.ವಿಶ್ವನಾಥ್, ಪಿಜಿಆರ್ ಸಿಂಧ್ಯಾ, ಜಿ.ಎಚ್.ನೀರಾವರಿ, ಬಂಡೆಪ್ಪ ಕಾಶೆಂಪುರ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕ ಮಧು ಬಂಗಾರಪ್ಪ, ಸಂಸದ ಸಿ.ಎಸ್.ಪುಟ್ಟರಾಜು, ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ, ಜೆಡಿಎಸ್ ಹಿಂದುಳಿದ ವರ್ಗಗಗಳ ರಾಜ್ಯಾಧ್ಯಕ್ಷ ಕೆ.ವಿ.ಅಮರನಾಥ್ ಮಾತನಾಡಿದರು.ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಫಾರೂಕ್, ಶಾಸಕರಾದ ಡಿ.ಸಿ.ತಮ್ಮಣ್ಣ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಬೇಲೂರು ಶಶಿಧರ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
Comments