ರಾಷ್ಟೀಯ ಪಕ್ಷಗಳ ಜಗಳದಲ್ಲಿ ಕುಮಾರಸ್ವಾಮಿಯೇ 'ಜನನಾಯಕ'

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕಲಹದ ಬಗ್ಗೆ ತಲೆಕೆಡಿಸಿಕೊಳ್ಳದೇ, ಜೆಡಿಎಸ್ ಮುಖಂಡರು ಚುನಾವಣಾ ಪ್ರಚಾರದಲ್ಲಿ ವ್ಯವಸ್ಥಿತವಾಗಿ ಮುನ್ನುಗ್ಗುತ್ತಿದ್ದಾರೆ.
ಯೋಗಿ, ಅಮಿತ್ ಶಾ ಮತ್ತು ಮೋದಿ ರಾಜ್ಯಕ್ಕೆ ಬಂದು ಹೋದ ನಂತರ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ 'ರಾಜಕೀಯ' ಮೇಲಾಟದ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯಿಸದ ಜೆಡಿಎಸ್ ಮುಖಂಡರು, ಪಕ್ಷಕ್ಕೆ ಅಷ್ಟೇನೂ ಅಥವಾ ಏನೂ ನೆಲೆಯಿಲ್ಲದ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತೊಡಗಿರುವುದು ಹೊಸ ರಾಜಕೀಯ ಲೆಕ್ಕಾಚಾರ ಎಂದೇ ಹೇಳಲಾಗುತ್ತಿದೆ. ನಾಲ್ಕೈದು ಜಿಲ್ಲೆಗಳಿಗೆ ಸೀಮಿತವೆಂದೇ ಬಿಂಬಿಸಲಾಗುತ್ತಿರುವ ಜೆಡಿಎಸ್, ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಭಾಗದಲ್ಲೂ ದಿನದಿಂದ ದಿನಕ್ಕೆ ತಮ್ಮ ಬಲವನ್ನು ವೃದ್ದಿಸಿಕೊಳ್ಳುತ್ತಿರುವುದು ಗಮನಿಸಬೇಕಾದ ಅಂಶ. ಇದಕ್ಕೆ ಪ್ರವಾಸದ ವೇಳೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ಸಿಗುತ್ತಿರುವ ಜನಬೆಂಬಲವೇ ಸಾಕ್ಷಿ.
ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿಯಿರುವುದರಿಂದ ಮತ್ತು ಮತದಾನದ ಹೊತ್ತಿನಲ್ಲಿ ಜೆಡಿಎಸ್ ಇಲ್ಲಿನ ಮತದಾರರಿಗೆ ರಾಷ್ಟ್ರೀಯ ಪಕ್ಷಗಳಿಗೆ ಹೊರತಾದ ಆಯ್ಕೆಯಾದರೆ ಅಚ್ಚರಿ ಪಡಬೇಕಾಗಿಲ್ಲ ಎನ್ನುವುದು ಈ ಭಾಗದಲ್ಲಿ ಸದ್ಯ ಕೇಳಿಬರುತ್ತಿರುವ ಮಾತು. ಜೆಡಿಎಸ್ ಸರಿಯಾದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಇಲ್ಲಿ ಅತ್ಯಂತ ನಿರ್ಣಾಯಕ ಎನ್ನುವ ಮಾತೂ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.'ರಾಷ್ಟ್ರೀಯ ಪಕ್ಷಗಳ ಕುಟಿಲ ನೀತಿಗಳಿಂದ ರಾಜ್ಯಕ್ಕೆ ಕಾವೇರಿ, ಮಹದಾಯಿ ನೀರು ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ' ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಜೆಡಿಎಸ್ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಗಳೇ ಜಾಸ್ತಿ. ರಾಮುಲು ದೇವೆಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ. ಈ ಹೊತ್ತಿನ ರಾಜಕೀಯದ ಬಗ್ಗೆ ಹೇಳುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ಇದೇ ರೀತಿ ಕಿತ್ತಾಡುವುದನ್ನು ಮುಂದುವರಿಸಿದರೆ, ಜನರು ಎರಡೂ ರಾಷ್ಟ್ರೀಯ ಪಕ್ಷಗಳ ಮೇಲೆ ಭ್ರಮನಿರಸನವಾಗುವ ಸಾಧ್ಯತೆಯಿದೆ. ಜೊತೆಗೆ, ಕುಮಾರಸ್ವಾಮಿ ಈಗ ಸಾಗುತ್ತಿರುವ ವೇಗದಲ್ಲೇ ಸಾಗಿದರೆ, ರಾಜ್ಯದ ಜನತೆಗೆ ಕುಮಾರಸ್ವಾಮಿ 'ಜನನಾಯಕ'ನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
Comments