ಓದಿರುವುದು 4ನೇ ಕ್ಲಾಸ್ ಪಾಠ ಮಾಡುವುದು ಪದವಿ, ಪಿಎಚ್ಡಿ ವಿದ್ಯಾರ್ಥಿಗಳಿಗೆ ಕುಂಟನಹಳ್ಳಿಯ ಲಕ್ಷ್ಮೇಗೌಡ




ದೊಡ್ಡಬಳ್ಳಾಪುರ ತಾಲೂಕಿನ ಕುಂಟನಹಳ್ಳಿಯ ಲಕ್ಷ್ಮೇಗೌಡರು ಹವ್ಯಾಸಕ್ಕಾಗಿ ಜೇನು ಸಾಕಾಣಿಕೆ ಕಲಿತದ್ದು, ಇಂದು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಪ್ರವೀಣ್ಯತೆ ಪಡೆದಿದ್ದಾರೆ. ಹುಳು ಹಿಡಿಯುವುದು, ಸಾಕಾಣಿಕೆ ಮಾಡುವುದು, ಹುಳುಗಳನ್ನು ಮತ್ತೊಂದು ಕಡೆಗೆ ಸಾಗಿಸುವುದು ಸೇರಿದಂತೆ ಜೇನು ಸಾಕಾಣಿಕೆಯ ಬಗ್ಗೆ ಇವರು ಪಾಠ ಮಾಡುತ್ತಾರೆ. ಪ್ರಾಯೋಗಿಕ ಪಾಠವನ್ನು ಕೇಳಲು ಬೆಂಗಳೂರು ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಮಾತ್ರವಲ್ಲ ಜರ್ಮನಿ, ಥಾಯ್ಲೆಂಡ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಲಕ್ಷ್ಮೇಗೌಡರ ಜೇನು ಸಾಕಾಣಿಕೆಗೆ ಅವರ ತಾಯಿಯೇ ಪ್ರೇರಣೆ. 35 ವರ್ಷಗಳಿಂದ ಜೇನು ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದು ವರ್ಷಕ್ಕೆ 40ರಿಂದ 50 ಕೆ.ಜಿ. ಜೇನುತುಪ್ಪವನ್ನು ತೆಗೆದು ಲಕ್ಷಕ್ಕೂ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ಜಮೀನಿನಲ್ಲಿ ವ್ಯವಸಾಯ ಮಾಡುವುದರ ಜೊತೆಗೆ ಬಿಡುವು ಸಿಕ್ಕಾಗ ಜೇನು ಸಾಕಾಣಿಕೆಯಲ್ಲಿ ತೊಡಗುತ್ತಾರೆ.
ಎರೆ ಹುಳುವಿನ ಹಾಗೆಯೇ ಜೇನು ಹುಳುಗಳು ಕೂಡ ರೈತನ ಆಪ್ತಮಿತ್ರ. ಜೇನು ಹುಳುಗಳು ಪ್ರಕೃತಿ ಸಹಜವಾಗಿ ಪರಾಗಸ್ವರ್ಶ ಮಾಡುವುದರಿಂದ ಹೊಲ ಮತ್ತು ತೋಟದಲ್ಲಿ ಫಸಲು ಬರುತ್ತದೆ, ಕೃಷಿಯ ಜೊತೆಯಲ್ಲಿಯೇ ಜೇನು ಸಾಕಾಣಿಕೆ ಮಾಡುತ್ತಾರೆ. ಬಯಲು ಸೀಮೆಯಲ್ಲಿ ಜೇನು ಸಾಕಾಣಿಕೆ ಮಾಡಿದ ಲಕ್ಷ್ಮೇಗೌಡ ಜೇನು ಸಾಕಣಿಕೆಯ ಪ್ರೊಫೆಸರ್ ಎಂದು ಕರೆಯುವ ಇವರು ಹಲವರಿಗೆ ಮಾದರಿಯಾಗಿದ್ದಾರೆ.
Comments