ಉದ್ಯೋಗ ಸೃಷ್ಟಿ ಕುರಿತ ಪ್ರಧಾನಿ ಮೋದಿ ಹೇಳಿಕೆಗೆ ಟಾಂಗ್ ಕೊಟ್ಟ ಎಚ್ ಡಿಕೆ
ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ್ದರು. ಪಕೋಡ ಮಾರಾಟ ಮಾಡುವುದೂ ಸಹ ಮೇಕ್ ಇನ್ ಇಂಡಿಯಾ ಎಂದು ಜನರಿಗೆ ಈಗ ಗೊತ್ತಾಗಿದೆ. ಉದ್ಯೋಗ ಕುರಿತು ಮೋದಿ ನೀಡಿದ ಭರವಸೆ ಯಾವುದು ಎಂದು ಜನರಿಗೆ ಈಗ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಯುವಕರು ಪಕೋಡ ಮಾರಾಟ ಮಾಡಿ ಬದುಬೇಕಿದೆ. ಇದೇ ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಎಂದು ಉದ್ಯೋಗ ಸೃಷ್ಟಿ ಕುರಿತ ಪ್ರಧಾನಿ ಮೋದಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಸೋಮವಾರದಿಂದ ಐದು ದಿನಗಳ ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು ಮಾಧ್ಯಮದವರ ಜತೆ ಮಾತಾನಡಿದರು. ಬಿಜೆಪಿ ಹಾಗೂ ಎಐಎಂಐಎಂ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಒಳ ಒಪ್ಪಂದದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಜನರ ಮುಂದೆ ಇಡಬೇಕು. ಕಾಂಗ್ರೆಸ್‌ಗೆ ಮುಸ್ಲಿಂ ಮತಗಳು ಹಿನ್ನಡೆಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟ ಆಗುವ ಭಯವಿರುವುದರಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ನೋಡಿದ್ದೇವೆ. ಆದ್ದರಿಂದ, ರಾಷ್ಟ್ರೀಯ ಪಕ್ಷಗಳ ಜೊತೆಗೆ ಮೈತ್ರಿ ಇಲ್ಲ. ಈ ಬಾರಿ ಸ್ವತಂತ್ರವಾಗಿ 113 ಸಂಖ್ಯೆಯನ್ನು ಜನ ಕೊಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹೆಚ್. ಡಿ. ದೇವೇಗೌಡರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಸುಮಾರು 5 ಲಕ್ಷ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಮಾಡಲಾಗುವುದು. ಆ ಸಮಾವೇಶದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.
Comments