ಜೆಡಿಎಸ್ ಪರ ಪ್ರಚಾರ ನಡೆಸುವ ಸ್ಟಾರ್ ಗಳ ವಿವರ

25 Jan 2018 11:47 AM |
11585 Report

ವಿಧಾನಸಭೆ ಚುನಾವಣೆ "ಸ್ಟಾರ್' ಪ್ರಚಾರಕ್ಕಾಗಿ ಜೆಡಿಎಸ್ ನೆರೆಯ ಆಂಧ್ರದಿಂದ ಪವರ್ಸ್ಟಾರ್ ಪವನ್ ಕಲ್ಯಾಣ್ಗೆ ಗಾಳ ಹಾಕಿದೆ. ಜತೆಗೆ, ಕಿಚ್ಚ ಸುದೀಪ್ ಅವರಿಗೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವಂತೆ ಖುದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವೊಲಿಸಿದ್ದಾರೆ.

ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್‌ಕುಮಾರ್‌ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವುದರಿಂದ ಶಿವರಾಜ್‌ಕುಮಾರ್‌ ಜೆಡಿಎಸ್‌ ಪರ ಪ್ರಚಾರಕ್ಕೆ ಆಗಮಿಸಬಹುದು ಎಂಬ ನಿರೀಕ್ಷೆಯೂ ಇದೆ. ಆದರೆ, ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಅವರ ಒಪ್ಪಿಗೆ ಇನ್ನೂ ಸಿಕ್ಕಿಲ್ಲ.

ಎಚ್‌.ಡಿ.ಕುಮಾರಸ್ವಾಮಿಯವರ ಪುತ್ರ ನಿಖೀಲ್‌ ಸಹ ಸಿನಿಮಾ ನಟರಾಗಿದ್ದು  ಅವರೂ ಜೆಡಿಎಸ್‌ಗೆ "ಸ್ಟಾರ್‌ ಪ್ರಚಾರಕ' ಆಗಲಿದ್ದಾರೆ. ಸಿನಿಮಾ ರಂಗದ ಸಂಪರ್ಕದಿಂದ ಕನ್ನಡ ಹಾಗೂ ತೆಲುಗು ಚಿತ್ರರಂಗದ ಕೆಲವು ನಟರನ್ನು ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಕರೆತರಲು ನಿಖೀಲ್‌ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ನಟರಿಂದ ಮತ ಗಿಟ್ಟುವುದಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ,  ಈ ಬಾರಿ ಮಾಡು ಇಲ್ಲವೇ ಮಡಿ ಹೋರಾಟ ನಡೆಯುತ್ತಿರುವುದರಿಂದ ಪಕ್ಷದ ಪರವಾಗಿ ಒಂದಷ್ಟು ಸ್ಟಾರ್‌ ಪ್ರಚಾರಗಳು ಇಳಿದರೆ ಆಕರ್ಷಣೆ ಇರುತ್ತದೆ ಎಂಬುದು ಪಕ್ಷದ ನಾಯಕರ ಸಲಹೆ. 

ಹೀಗಾಗಿ, ಕುಮಾರಸ್ವಾಮಿ ಪವನ್‌ಕಲ್ಯಾಣ್‌ ಜತೆ ಮಾತುಕತೆ ನಡೆಸಿ ಒಪ್ಪಿಸಿದ್ದಾರೆ. ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಪವನ್‌ ಕಲ್ಯಾಣ್‌ ಅಭಿಮಾನಿಗಳನ್ನು ಹೊಂದಿರುವುದರಿಂದ ಅವರು ಪ್ರಚಾರಕ್ಕೆ ಬಂದರೆ ನೆರವಾಗಬಹುದು ಎಂಬ ಲೆಕ್ಕಾಚಾರ ಇದೆ.

Edited By

hdk fans

Reported By

hdk fans

Comments