ಡಿಕೆಶಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ತೆರೆ ಎಳೆದ ಎಚ್ ಡಿಕೆ
"ಚನ್ನಪಟ್ಟಣ ಕ್ಷೇತ್ರದಲ್ಲಿ ಅನಿತಾ ಅವರನ್ನು ಕಣಕ್ಕೆ ಇಳಿಸಲು ಡಿ.ಕೆ. ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀನಿ ಅನ್ನೋದೆಲ್ಲ ಸುಳ್ಳು. ರಾಜಕೀಯ ಜೀವನದಲ್ಲಿ ಗೆಲ್ತೀನೋ ಸೋಲ್ತಿನೋ ಗೊತ್ತಿಲ್ಲ. ಆದರೆ ಗೆಲುವು ಸಾಧಿಸಬೇಕು ಅನ್ನೋ ಕಾರಣಕ್ಕೆ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸ ಮಾಡುವುದಿಲ್ಲ" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಡದಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಕಾರ್ಯಕರ್ತನಿಗೆ ಐದು ಕೋಟಿ ಕೊಟ್ಟು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬೇಕಾದಷ್ಟು ಕಾರ್ಯಕರ್ತರನ್ನು ಸೆಳೆಯಲಿ ಎಂದ ಎಚ್ ಡಿಕೆ, ನಮ್ಮ ಒಬ್ಬ ಕಾರ್ಯಕರ್ತನನ್ನು ಸೆಳೆಯಲು ಐದು ಕೋಟಿ ಖರ್ಚು ಮಾಡುವ ಮುಖ್ಯಮಂತ್ರಿಗಳು ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಷ್ಟು ಕೋಟಿ ಖರ್ಚು ಮಾಡಬಹುದು ಎಂದು ಪ್ರಶ್ನಿಸಿದರು.ಶ್ರೀರಂಗಪಟ್ಟಣ ಸಮಾವೇಶದಲ್ಲಿ ಜನರಿಗೆ ಬೆಳ್ಳಿ ಸಾಮಾನು ಹಂಚಿ ಸಮಾವೇಶಕ್ಕೆ ಜನರನ್ನು ಕರೆತಂದಿದ್ದಾರೆ. ನಮ್ಮ ಸಮಾವೇಶಗಳಿಗೆ ಸಾಗರದಂತೆ ಬರುವ ಜನರನ್ನು ಮಾಧ್ಯಮಗಳು ತೋರಿಸುವುದಿಲ್ಲ. ನಾನು ನಕಾರಾತ್ಮಕವಾಗಿ ಮಾತನಾಡಿದರೆ ಮಾತ್ರ ತೋರಿಸುತ್ತಾರೆ. ಮಾಧ್ಯಮಗಳ ಸಮೀಕ್ಷೆಯನ್ನೆಲ್ಲ ಸುಳ್ಳು ಮಾಡಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಅನಿತಾ ಅವರನ್ನು ಕಣಕ್ಕಿಳಿಸುವ ಇರಾದೆ ಜೆಡಿಎಸ್ ಗಿದೆ. ಅಲ್ಲಿ ಈಚೆಗೆ ಬಿಜೆಪಿಗೆ ಸೇರ್ಪಡೆ ಆಗಿರುವ ಸಿ.ಪಿ.ಯೋಗೇಶ್ವರ್ ನನ್ನು ಸೋಲಿಸಲು ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.ಸಿ.ಪಿ.ಯೋಗೇಶ್ವರ್ ಈಚೆಗೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸೋದರ- ಸಂಸದ ಡಿ.ಕೆ.ಸುರೇಶ್ ವಿರುದ್ಧ ಭಾರೀ ವಾಗ್ದಾಳಿ ನಡೆಸುತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಹೇಗಾದರೂ ಯೋಗೇಶ್ವರ್ ನನ್ನು ಸೋಲಿಸಬೇಕು ಎಂಬುದು ಡಿಕೆಶಿ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆ ಕಾರಣಕ್ಕೆ ಜೆಡಿಎಸ್ ಗೆ ಬೆಂಬಲ ನೀಡಿಯಾದರೂ ತಮ್ಮ ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂಬುದು ಸ್ಥಳೀಯವಾಗಿ ಕೇಳಿಬರುತ್ತಿರುವ ಮಾತು.
Comments