ಜನರಿಗೆ ಬೇಕಾಗುವ ಸಾಮಾನ್ಯ ಸೌಕರ್ಯಗಳಿಗೆ ನಮ್ಮೂರಿನಲ್ಲಿ ಇನ್ನೂ ಕೊರತೆ ಇರಬೇಕಾದರೆ 2650 ಕೋಟಿ ರೂ. ಹೋದದ್ದಾದರು ಎಲ್ಲಿಗೆ? ಹಾಲಿ ಮತ್ತು ಮಾಜಿ ಶಾಸಕರ ಗಮನಕ್ಕೆ
ಮಾನ್ಯರೇ, ದೊಡ್ಡಬಳ್ಳಾಪುರ ನಗರ ಬೆಂಗಳೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಒಂದು ಊರು. ರಾಜ್ಯ ರಾಜಧಾನಿ ಬೆಂಗಳೂರಿನಿಂದ 100-150 ಕಿ.ಮೀ ದೂರದಲ್ಲಿರುವ ನಗರಗಳು ಅಭಿವೃದ್ಧಿಯಲ್ಲಿ ನಮಗಿಂತ ಒಂದು ಹೆಜ್ಜೆ ಮುಂದಿವೆ, ಆದರೆ ಬೆಂಗಳೂರಿನ ಪಕ್ಕದಲ್ಲೇ ಇರುವ ನಮ್ಮೂರು ಮಾತ್ರ ಅಭಿವೃದ್ಧಿಯಲ್ಲಿ ಹಿಂದೆ ಉಳಿದು ಬಿಟ್ಟಿದೆ. ಒಂದೆಡೆ ಸುಮಾರು 5-6 ತಿಂಗಳುಗಳ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ವಿವಿಧ ಶಂಕುಸ್ಥಾಪನೆಗಾಗಿ ದೊಡ್ಡಬಳ್ಳಾಪುರಕ್ಕೆ ಬಂದಾಗ ಹಾಲಿ ಶಾಸಕರು "ದೊಡ್ಡಬಳ್ಳಾಪುರಕ್ಕೆ ನನ್ನ ಅಧಿಕಾರಾವಧಿಯಲ್ಲಿ ಹಿಂದೆ ಯಾರು ತರಲು ಅಸಾಧ್ಯವಾದಂತಹ 2000 ಕೋಟಿ ರೂಪಾಯಿಯಷ್ಟು ಅನುದಾನವನ್ನು ನಾನು ತಂದಿದ್ದೇನೆ" ಎಂದದ್ದು ಜನತೆ ಇನ್ನೂ ಮರೆತಿಲ್ಲ. ಈ ನಾಲ್ಕು ಮುಕ್ಕಾಲು ವರ್ಷದ ಅಧಿಕಾರಾವಧಿಯಲ್ಲಿ ನಮ್ಮೂರಿಗೆ 2000 ಕೋಟಿ ಅನುದಾನ ತಂದಿರುವುದು ಸಂತಸದ ವಿಷಯವೆಂದು ನೆರೆದಿದ್ದ ಜನ ಜೋರಾಗಿ ಚಪ್ಪಾಳೆ ತಟ್ಟಿದ್ದರು. ಒಂದು ವಾರದ ಹಿಂದೆ ಪರಿವರ್ತನಾ ಯಾತ್ರೆಯಲ್ಲಿ ಮಾನ್ಯ ಮಾಜಿ ಶಾಸಕರು "ನನ್ನ ಅಧಿಕಾರಾವಧಿಯಲ್ಲಿ ದೊಡ್ಡಬಳ್ಳಾಪುರಕ್ಕೆ ಸುಮಾರು 650 ಕೋಟಿ ಅನುದಾನವನ್ನು ನಾನು ತಂದಿದ್ದೆ" ಎಂದರು. ಇದಕ್ಕೂ ಸಹ ಜನರು ಖುಷಿಯಿಂದ ಚಪ್ಪಾಳೆ ತಟ್ಟಿದರು.
ಹಾಲಿ ಮತ್ತು ಮಾಜಿ ಶಾಸಕರು ಹೇಳಿದ ಮಾತಿನಂತೆ ದೊಡ್ಡಬಳ್ಳಾಪುರ ನಗರಕ್ಕೆ ಕಳೆದ 10 ವರ್ಷದಲ್ಲಿ ಸಿಕ್ಕ ಅನುದಾನ ಒಟ್ಟಾರೆಯಾಗಿ 2650 ಕೋಟಿ ರೂಪಾಯಿ. ಇಷ್ಟು ದೊಡ್ಡ ಮೊತ್ತದ ಅನುದಾನ ಪಡೆದಿರುವ ತಾಲ್ಲೂಕಿನಲ್ಲಿ ಇಂದಿಗೂ ಓಡಾಡುವುದಕ್ಕೆ ಸರಿಯಾದ ರಸ್ತೆಯಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಉಪಕರಣಗಳಿಲ್ಲ, ಬೆಂಗಳೂರಿಗೂ ಸಮರ್ಪಕ ಬಸ್ಸಿನ ವ್ಯವಸ್ಥೆಯಿಲ್ಲ, ಬಹುತೇಕ ಹಳ್ಳಿಗಳಿಗೆ ಒಂದಕ್ಕಿ ಹೆಚ್ಚು ಬಸ್ಸುಗಳಿಲ್ಲ, ತಾಲೂಕಿನಲ್ಲಿ ಉತ್ತಮವಾದ ಶಿಕ್ಷಣ ವ್ಯವಸ್ಥೆಯಿಲ್ಲ, ವಿಧ್ಯಾವಂತರಿಗೆ ನಮ್ಮೂರಿನಲ್ಲಿಯೇ ಉದ್ಯೋಗಕ್ಕೆ ವ್ಯವಸ್ಥೆಯಿಲ್ಲ, ವಿಧ್ಯಾಬ್ಯಾಸಕ್ಕೂ ಬೆಂಗಳೂರಿನೆಡೆಗೆ ಹೋಗುವುದು ಮತ್ತು ಉದ್ಯೋಗಕ್ಕೂ ಬೆಂಗಳೂರಿನೆಡೆಗೆ ಹೋಗುವುದು ನಿಂತಿಲ್ಲ!
#ನನ್ನ_ಕನಸಿನ_ದೊಡ್ಡಬಳ್ಳಾಪುರ
ವರದಿ: ಚೇತನ್ ಕೃಷ್ಣ, ಯುವ ಬ್ರಿಗೇಡ್,
Comments