ದೊಡ್ಡಬಳ್ಳಾಪುರ ನಗರಕ್ಕೆ ಕಾಲಿಟ್ಟಿದೆ ಇರಾನಿ ಗ್ಯಾಂಗ್, ಎರಡು ದಿನಗಳಿಂದ ರಾತ್ರಿ, ಹಗಲೆನ್ನದೆ ಸರಗಳ್ಳತನಗಳು ನಡೆಯುತ್ತಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿದೆ.
ನಗರದಲ್ಲಿಯೇ ಹೆಚ್ಚು ಜನ ಓಡಾಡುವ ರಂಗಪ್ಪ ಸರ್ಕಲ್ ಬಳಿಯಿರುವ ಮನೆಗೆ ಶುಕ್ರವಾರ ಬೆಳಿಗ್ಗೆ 10.30ರ ವೇಳೆಯಲ್ಲಿ ಶಾರದಮ್ಮ ವನ್ನಿಗರ ಪೇಟೆಯ ಮೂಲಕ ನಡೆದುಕೊಂಡು ಬರುತ್ತಿರುವಾಗ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಶಾರದಮ್ಮ ಅವರನ್ನು ನೂಕಿ ಅವರಿಂದ ಸುಮಾರು 70 ಗ್ರಾಂಗಳಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಶನಿವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ನಗರದ ಚೌಡೇಶ್ವರಿಗುಡಿ ಬೀದಿಯುಲ್ಲಿ ನಡೆದುಕೊಂಡು ಹೋಗುತ್ತಿದ್ದ ಉಮಾದೇವಿ ಎಂಬುವವರ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆಂದು ಕುಚ್ಚಪ್ಪನಪೇಟೆಯಲ್ಲಿ ನಾಗರತ್ನಮ್ಮ ಅವರು ತಮ್ಮ ಮನೆಯ ಮುಂದೆ ರಂಗೋಲಿ ಬಿಡುತ್ತಿದ್ದ ವೇಳೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಇಬ್ಬರು ಯುವಕರು ಬಂದು ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಎಲ್ಲ ಪ್ರಕರಣವನ್ನು ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇರಾನಿ ಗ್ಯಾಂಗ್ ಶಂಕೆ: ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಸರಕಳವು ಮಾಡುವುಲ್ಲಿ ಸಕ್ರಿಯವಾಗಿರುವ ಇರಾನಿ ಗ್ಯಾಂಗ್‌ನ ಸಹಚರರು ನಗರಕ್ಕೆ ಕಾಲಿಟ್ಟಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸರಗಳವು ನಡೆದಿರುವ ಕೆಲವು ಕಡೆಗಳಲ್ಲಿನ ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ಪೊಲೀಸರಿಗೆ ದೊರೆತಿದ್ದು ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಸರಗಳ್ಳರು ಕಾರ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಇರಾನಿ ಗ್ಯಾಂಗ್ ಸಹಚರರು ಸಾಮಾನ್ಯವಾಗಿ ಬೈಕ್‌ಗಳಲ್ಲಿ ಬಂದು ಸರಣಿಯಾಗಿ ಕಳವು ನಡೆಸುತ್ತಾರೆ ಎನ್ನುವ ಸರ್ಕಲ್ ಇನ್ ಸ್ಪೆಕ್ಟರ್ ಜಿ.ಸಿದ್ದರಾಜು, ಸಿಸಿ ಕ್ಯಾಮರಗಳಲ್ಲಿನ ದೃಶ್ಯಾವಳಿಗಳಲ್ಲಿನ ಭಾವ ಚಿತ್ರಗಳನ್ನು ಗಮನಿಸಿದರೆ ಈ ಹಿಂದೆ ಇರಾನಿ ಗ್ಯಾಂಗ್‌ಗಳಲ್ಲಿ ಸಕ್ರಿಯರಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವವರೆ ಆಗಿದ್ದಾರೆ. ಭಾನುವಾರದಿಂದ ನಗರ ಸೇರಿದಂತೆ ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ನಾಕಬಂದಿ ಹಾಕಿದ್ದು ಅನುಮಾಸ್ಪದ ವಾಹನಗಳು, ಬೈಕ್ ಸವಾರರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮಹಿಳೆಯರು ಸಂಜೆ ವೇಳೆಯಲ್ಲಿ ಒಂಟಿಯಾಗಿ ಒಡಾಡುವಾಗ ಅಥವಾ ಬೇರಾವುದೆ ಸಂದರ್ಭದಲ್ಲಿ ಕುತ್ತಿಗೆಯಲ್ಲಿನ ಚಿನ್ನದ ಸರಗಳು ಹೊರಗೆ ಕಾಣದಂತೆ ಬಟ್ಟೆ ಮುಚ್ಚಿಕೊಳ್ಳುವುದು, ವಿಳಾಸ ಕೇಳುವ ನೆಪದಲ್ಲಿ ಅಪರಿಚತರು ಬೈಕ್‌ಗಳಲ್ಲಿ ಬಂದಾಗ ಎಚ್ಚರ ವಹಿಸುವುದು ಸೇರಿದಂತೆ ಮುನ್ನೆಚ್ಚರಿಕೆಗಳನ್ನು ಸಾರ್ವಜನಿಕರು ವಹಿಸಬೇಕು ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಇರಾನಿ ಗ್ಯಾಂಗ್‌ನ ಸರಗಳ್ಳರು ಬೆಂಗಳೂರಿನ ಕಡೆಗೆ ಹೋಗುವಾಗ ಮತ್ತೆ ಹಿಂದಿರುಗಿ ಹೋಗುವಾಗ ದಾರಿಯಲ್ಲಿನ ಸಣ್ಣಪುಟ್ಟ ನಗರಗಳಲ್ಲೂ ಸರಗಳವು ಮಾಡಿಕೊಂಡು ಹೋಗುತ್ತಾರೆ. ಎರಡು ದಿನಗಳಿಂದ ಬೆಂಗಳೂರಿನ ನಾನಾ ಕಡೆಗಳಲ್ಲೂ ನಿರಂತರವಾಗಿ ಸರಗಳ್ಳತನ ನಡೆಯುತ್ತಿವೆ. ಹೀಗಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಸೂಕ್ತ ಮಾಹಿತಿಗಳನ್ನು ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ
Comments