ಸಂಕ್ರಾಂತಿ ನಂತರ ಮನೆ ಮನೆಗೆ ಕುಮಾರಣ್ಣ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಮಕರ ಸಂಕ್ರಾಂತಿ ಹಬ್ಬದ ನಂತರ ಮತ್ತೆ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ.
ಬೆಂಗಳೂರು ನಗರದ ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಪ್ರತಿ ವಾರ್ಡ್‍ಗಳಲ್ಲೂ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಸಂಕ್ರಾಂತಿ ಹಬ್ಬದ ನಂತರ ಒಂದೂವರೆ ತಿಂಗಳ ಕಾಲ ನಿರಂತರವಾಗಿ ಪ್ರತಿ ಮನೆಗೂ ಜೆಡಿಎಸ್ ಮಾಹಿತಿಯನ್ನು ಕೊಂಡೊಯ್ಯಲು ನಿರ್ಧರಿಸಿದೆ.ಫೆಬ್ರವರಿ ಅಂತ್ಯದವರೆಗೂ ಈ ಕಾರ್ಯಕ್ರಮವನ್ನು ಕೈಗೊಳ್ಳಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ಹಾಗೂ ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿರುವ ಕೊಡುಗೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.
ಅದೇ ರೀತಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 20 ತಿಂಗಳ ಕಾಲ ನಡೆಸಿದ ಆಡಳಿತಾವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಮನೆ ಮನೆಗೂ ತಲುಪಿಸಲು ಉದ್ದೇಶಿಸಿದೆ. ಈಗಾಗಲೇ ಪ್ರತಿ ವಾರ್ಡ್‍ಗಳಲ್ಲೂ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ಬೆಂಗಳೂರು ನಗರ ನಾಗರಿಕರ ಮನವೊಲಿಸುವ ಕಾರ್ಯಕ್ರಮ ಮಾಡಲು ಜೆಡಿಎಸ್ ನಿರ್ಧರಿಸಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಮತಗಟ್ಟೆ ಸಮಿತಿಗಳನ್ನು ರಚಿಸಿ ಚುನಾವಣಾ ತಂತ್ರಗಳನ್ನು ರೂಪಿಸಲು ಉದ್ದೇಶಿಸಿದ್ದಾರೆ. ಬೆಂಗಳೂರು ಪ್ರತಿನಿಧಿಸುವ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಕೂಡ ಪಾಲ್ಗೊಂಡು ಜೆಡಿಎಸ್ ಪರವಾಗಿ ಪರಿಣಾಮಕಾರಿ ಪ್ರಚಾರವನ್ನು ಮಾಡಲಿದ್ದಾರೆ. ಅಲ್ಲದೆ ಆಯಾ ಜೆಡಿಎಸ್ ಘಟಕದ ಅಧ್ಯಕ್ಷರು, ಟಿಕೆಟ್ ಆಕಾಂಕ್ಷಿಗಳು, ಮುಖಂಡರು ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಲು ನಿರ್ಧರಿಸಿದ್ದಾರೆ. ಕನಿಷ್ಠ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕೆಂಬ ಗುರಿ ಹೊಂದಿದ್ದು, ಈ ನಿಮಿತ್ತ ಮುಖಂಡರು, ಕಾರ್ಯಕರ್ತರು ಉತ್ಸುಕರಾಗಿ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ.
Comments