ಮೈಸೂರಿನಲ್ಲಿ ನಡೆದ ಬೌದ್ಧಿಕ ಚಿಂತನೆ ಕಾರ್ಯಕ್ರಮದಲ್ಲಿ ಎಚ್ ಡಿಕೆ ಹೇಳಿದ್ದೇನು?
ನಾನು ಆಡಳಿತದ ವಿಚಾರದಲ್ಲಿ ಯಾರಿಗೂ ಮಣೆ ಹಾಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜೆ.ಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಬಲ್ಲವರೊಡನೆ ಬೌದ್ಧಿಕ ಚಿಂತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿಂತನೆ ನಡೆಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶಿಕ್ಷಣ ತಜ್ಞರು, ವೈದ್ಯಕೀಯ ಕ್ಷೇತ್ರದ ಪರಿಣಿತರು ಸಲಹೆ ನೀಡಿದರು. ಕುಮಾರಸ್ವಾಮಿಯವರೇ ಮೌಲ್ಯಯುತ ರಾಜಕಾರಣ ಮಾಡಿ. ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಭ್ರಷ್ಟಚಾರ ತುಂಬಿದೆ. ಆಡಳಿತದಲ್ಲಿ ಉತ್ತಮರಿಗೆ ಅವಕಾಶ ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿಯೂ ಫುಡ್ ಪಾರ್ಕ್ ಮಾಡಬೇಕು. ನಿಮ್ಮ ಪಕ್ಷದಲ್ಲಿ ಹಣವಂತರಿಗೆ ಅವಕಾಶ ನೀಡದೇ, ಗುಣವಂತರಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.
ಈ ಸಂದರ್ಭ ಮಾತನಾಡಿದ ಕುಮಾರಸ್ವಾಮಿ ಅವರು ರಾಜಕೀಯ ವ್ಯವಸ್ಥೆ ಬದಲಾವಣೆ ಹಿನ್ನಲೆಯಲ್ಲಿ ಚಿಂತನೆ ಏರ್ಪಡಿಸಲಾಗಿದೆ. ರಾಜ್ಯದಲ್ಲಿನ ಬೆಳವಣಿಗೆಗಳಲ್ಲಿ ನಾನು ಮುಖ್ಯಮಂತ್ರಿಯಾದೆ, 6.,5. ಕೋಟಿ ಜನರ ಆಶೀರ್ವಾದ ಸಿಕ್ಕಿರಲಿಲ್ಲ. ಅನುಭವ ಇಲ್ಲದಿದ್ದರೂ ನಾಡಿನ ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಂದ ರಾಜಕೀಯ ಅನುಭವ ಪಡೆದೆ.ಜನರಲ್ಲಿ ಒಂದು ನಂಬಿಕೆ ಇದೆ, ಕುಮಾರಸ್ವಾಮಿಗೆ ಅವಕಾಶ ನೀಡಬೇಕು ಎಂದು ಬಯಸಿದ್ದಾರೆ. ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹಿರಿಯ ಅನುಭವಿಗಳನ್ನು ವಿಧಾನ ಸೌದಕ್ಕೆ ಕರೆಸಿಕೊಂಡು ಮಾರ್ಗದರ್ಶನ ಪಡೆಯುತ್ತೇನೆ. ಅನುಭವ ಇರುವ ಕೃಷಿಕರನ್ನು ವಿಧಾನಸೌದಕ್ಕೆ ತಿಂಗಳಿಗೆ ಒಮ್ಮೆ ಆಹ್ವಾನ ನೀಡಿ ಮಾರ್ಗದರ್ಶನ ಪಡೆಯುತ್ತೇನೆ ಎಂದರು.
ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇರೋ 51 ಸಾವಿರ ಕೋಟಿ ಸಾಲ ಮನ್ನಾಕ್ಕೆ ಚಿಂತನೆ ನಡೆಸಲಾಗುವುದು. ರೈತರ ಸಾಲ ಮನ್ನಾ ಮಾಡಿ ರೈತನಿಗೆ ವಿಮುಕ್ತಿ ನೀಡಲು ಪ್ರಯತ್ನಿಸಲಾಗುವುದು ಎಂದರು. ಸರ್ಕಾರಗಳು ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಬೆಲೆ ಕಡಿಮೆಯಾದಾಗ ಬೆಂಬಲ ಬೆಲೆ ಕೊಡುವ ಔದಾರ್ಯವನ್ನು ಸರ್ಕಾರ ವಹಿಸಲ್ಲ. ಸರ್ಕಾರಗಳು ಮಧ್ಯವರ್ತಿಗಳಿಗಾಗಿ ಕೆಲಸ ಮಾಡುತ್ತವೆ.
ರೈತನ ಬಳಿ ಬೆಳೆ ಇದ್ದ ಸಂದರ್ಭದಲ್ಲಿ ಖರೀದಿ ಕೇಂದ್ರ ತೆರೆಯೋದಿಲ್ಲ. ರೈತರು ಮಧ್ಯವರ್ತಿಗೆ ಬೆಳೆ ಮಾರಾಟ ಮಾಡುವ ವೇಳೆ ಖರೀದಿ ಕೇಂದ್ರ ಆರಂಭಿಸುತ್ತಾರೆ ಎಂದರು. ಪ್ರೊ.ರಂಗಪ್ಪಗೆ ಮಂತ್ರಿ ಮಾಡಿ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ಯಾವುದೇ ರಾಜಕೀಯ ಪಕ್ಷಗಳ ಒತ್ತಡಗಳಿಗೆ ಒಳಗಾಗುವುದಿಲ್ಲ. ನಾನು ನಿರ್ಣಯ ತೆಗೆದುಕೊಳ್ಳುವ ವೇಳೆ ಕಠಿಣ ನಿರ್ಧಾರ ಕೈಗೊಳ್ಳುತ್ತೇನೆ. ಕುಟುಂಬ ರಾಜಕಾರಣ, ಸಂಬಂಧಿಗಳಿಗೆ ಮಣೆ ಹಾಕೋ ವಿಚಾರದಲ್ಲಿ ನನಗೆ ಸ್ವತಃ ಅನುಭವ ಇದೆ. ನಾನು ಆಡಳಿತದ ವಿಚಾರದಲ್ಲಿ ಯಾರಿಗೂ ಮಣೆ ಹಾಕುವುದಿಲ್ಲ ಎಂದರು.
Comments