ಉಪ್ಪಿ-ರಜನಿ ರಾಜಕೀಯ ಜುಗಲ್ ಬಂದಿ

ಉಪ್ಪಿ- ರಜನಿ ಇಬ್ಬರೂ ಏಕ ಕಾಲಕ್ಕೆ ಸುದ್ದಿಯಲ್ಲಿದ್ದಾರೆ. ಅದೂ ರಾಜಕೀಯ ವಿಷಯಕ್ಕೆ. ಹಾಗೆ ನೋಡಿದರೆ ರಜನೀಕಾಂತ್ ಗಿಂತ ಉಪೇಂದ್ರ ರಾಜಕಾರಣದಲ್ಲಿ ಸೀನಿಯರ್ ಆಗಿಬಿಟ್ಟರು. ಏಕೆಂದರೆ ತಮ್ಮ ಕೆಪಿಜೆಪಿ ಪಕ್ಷದ ಆರಂಭವನ್ನು ಘೋಷಿಸಿ, ಪ್ರಸ್ತಾವಿತ ಪ್ರಣಾಳಿಕೆಯನ್ನು ಜನರ ಮುಂದೆ ತಂದು, ರಾಜ್ಯದೆಲ್ಲೆಡೆ ಸುತ್ತಾಡುತ್ತಾ ಸಂಘಟನೆ ಆರಂಭಿಸಿಬಿಟ್ಟರು.
ಪ್ರಾದೇಶಿಕ ಪಕ್ಷ ಅಂತಾದಾಗ ಆ ರಾಜ್ಯದ ನೆಲ, ಜಲ, ಭಾಷೆ ವಿಚಾರವಾಗಿ ರಾಜಕೀಯ ಪಕ್ಷವೊಂದು ನಿಲುವನ್ನು ಸ್ಪಷ್ಟ ಪಡಿಸುವುದು ಅಗತ್ಯ ಹಾಗೂ ಅನಿವಾರ್ಯ. ಇನ್ನು ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯ ಕಾವೇರಿ ನೀರಿನ ವಿಚಾರವಾಗಿ ಈಗಾಗಲೇ ವಿವಾದವಿದೆ. ಎರಡೂ ಪಕ್ಷಗಳು ಒಂದಾಗಿ ಕೈ ಜೋಡಿಸಿದರೆ ಪರಸ್ಪರ ಹೊಡೆತ ಬಿದ್ದಂತಾಗುತ್ತದೆ. ಇಬ್ಬರೂ ಚಿತ್ರರಂಗದವರೇ ಆದರೂ ಉಪೇಂದ್ರ ಹಾಗೂ ರಜನೀಕಾಂತ್ ಮಧ್ಯ ಅಗಾಧ ವ್ಯತ್ಯಾಸವಿದೆ. ಉಪೇಂದ್ರ ರಾಜಕೀಯ ಪ್ರವೇಶದ ವಿಚಾರಕ್ಕೂ ರಜನೀಕಾಂತ್ ಸ್ವಂತ ಪಕ್ಷ ಆರಂಭಿಸುವುದಕ್ಕೂ ಅಜಗಜಾಂತರ. ಇಬ್ಬರೂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಧೋರಣೆ ಹಾಗೂ ಆಲೋಚನೆ ದೃಷ್ಟಿಯಿಂದ ಭಿನ್ನ ನೆಲೆಯಲ್ಲಿದ್ದಾರೆ.
ನಿರೀಕ್ಷೆಯ ವಿಚಾರಕ್ಕೆ ಬಂದರೆ ರಜನೀಕಾಂತ್ ರನ್ನು ಅದಾಗಲೇ ತಮಿಳುನಾಡಿನ ಮುಖ್ಯಮಂತ್ರಿ ಅಭ್ಯರ್ಥಿ ಅಂತಲೇ ಮಾತು ಹರಿದಾಡುತ್ತಿದೆ. ಇದು ಅಭಿಮಾನಿ ವಲಯದಲ್ಲೇ ಇರಬಹುದು ಅಥವಾ ಮಾಧ್ಯಮ ವಲಯದಲ್ಲೇ ಇರಬಹುದು. ಈ ಪರಿಯ ಅಥವಾ ಪ್ರಮಾಣದ ನಿರೀಕ್ಷೆ ಉಪೇಂದ್ರ ಹಾಗೂ ಕೆಪಿಜೆಪಿ ಬಗ್ಗೆ ಇಲ್ಲ. ರಜನೀಕಾಂತ್ ರ ಜನಪ್ರಿಯತೆಯಿಂದ ಉಪ್ಪಿಗೆ ಲಾಭ ಅನ್ನೋ ಮಾತು ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಉಪೇಂದ್ರ ರಾಜಕೀಯ ಪಕ್ಷ ಸ್ಥಾಪನೆ ಎಂಬುದು ಅವರೇ ಹೇಳಿಕೊಳ್ಳುವಂತೆ ಒಂದು ಪ್ರಯತ್ನ ಅಷ್ಟೇ. ಅದರಲ್ಲಿ ಸೋಲು- ಗೆಲುವು ಎಂಬ ಪ್ರಶ್ನೆಯೇ ಇಲ್ಲ. ಆದರೆ ರಜನೀಕಾಂತ್ ರಿಗೆ ಹೊಸ ಪಕ್ಷ ಎಂಬುದು ಪ್ರತಿಷ್ಠೆಯ ವಿಚಾರ. ಎರಡು ರಾಜಕೀಯ ಪಕ್ಷಗಳು ಕೈ ಜೋಡಿಸುವ ಸನ್ನಿವೇಶಗಳೇ ಬೇರೆಯಾಗಿರುತ್ತವೆ. ರಜನೀಕಾಂತ್ ರ ರಾಜಕೀಯ ಪ್ರವೇಶದ ಗಾಂಭೀರ್ಯವು ಮೇಲುನೋಟಕ್ಕೆ ಉಪೇಂದ್ರರಿಗಿಂತ ಸ್ವಲ್ಪ ಹೆಚ್ಚು ಎಂಬುದು ಸತ್ಯ.
Comments