ಓಪನ್ ಡಿಬೇಟ್‌ಗೆ ಬರಲು ವಿಪಕ್ಷಗಳಿಗೆ ಎಚ್ ಡಿಕೆ ಸವಾಲ್
ಅನ್ನ ಭಾಗ್ಯ ಸಿದ್ದರಾಮಯ್ಯ ಅವರದ್ದಲ್ಲ. ಪುಕ್ಕಟೆ ಅಕ್ಕಿ ಕೊಡುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲೆಷ್ಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನೀವು ಯಾವ್ಯಾವ ಟೈಮಲ್ಲಿ ಯಾರ್ಯಾರ ಕಾಲು ಹಿಡಿದ್ರಿ ಅನ್ನೋದು ನನಗೆ ಗೊತ್ತಿದೆ. ಜೆಡಿಎಸ್ ಪಕ್ಷದಲ್ಲಿ ಡಿಸಿಎಂ ಆಗಿ ಕೆಲಸ ಮಾಡಿದ್ದೀರಿ, ಆವಾಗ ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತ ಗೊತ್ತಿರಲಿಲ್ವಾ. ಬಹಳ ಹಗುರವಾಗಿ ಮಾತನಾಡಬೇಡಿ ಎಂದು ಸಿಎಂಗೆ ಎಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದರು.
ಇಲ್ಲಿವರೆಗೆ ಅಪಾರ್ಥರಿಗೆ ಅಧಿಕಾರ ಕೊಟ್ಟಿದ್ದೀರಿ. ಎಚ್.ಡಿ.ಕುಮಾರಸ್ವಾಮಿ ಈ ರಾಜ್ಯವನ್ನ ಹಾಳು ಮಾಡ್ತಾರೆ ಅಂತಾನೇ ಜೆಡಿಎಸ್‌ಗೆ ಅಧಿಕಾರ ಕೊಡಿ ಎಂದು ಹೆಚ್‌ಡಿಕೆ ಮನವಿ ಮಾಡಿದರು. ಮಹಾದಾಯಿ ವಿಚಾರದಲ್ಲಿ ಮಾಜಿ ಪಿಎಂ ದೇವೇಗೌಡರು ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗಾಗಿ ನಾವೇನು ಮಾಡಿದ್ದೀವಿ, ಕಾಂಗ್ರೆಸ್ - ಬಿಜೆಪಿಯವರು ಏನು ಮಾಡಿದ್ದಾರೆ ಅನ್ನೋ ಓಪನ್ ಡಿಬೇಟ್‌ಗೆ ಒಂದೇ ವೇದಿಕೆಯಲ್ಲಿ ಎರಡು ಪಕ್ಷದವರು ಬರಲಿ ಎಂದು ಸವಾಲ್ ಹಾಕಿದರು.ದುಡಿಮೆ ಮೇಲೆ ಮತ ಕೇಳುವ ಕೆಪ್ಯಾಸಿಟಿ ಕಾಂಗ್ರೆಸ್ಸಿಗಿಲ್ಲ. ಜಾತಿಗಳ ಮೇಲೆ ಮತ ಕೇಳ್ತಾರೆ. ಸಿಎಂ ಸಿದ್ದರಾಮಯ್ಯ ಪ್ರತಿ ಕಾರ್ಯಕ್ರಮದಲ್ಲಿ ಅವರಪ್ಪನ ಮೇಲೆ ಆಣೆ ಅವರು ಸರ್ಕಾರ ರಚಿಸಲ್ಲ ಅಂತ ಹೇಳ್ತಾರೆ. ನಮ್ಮಪ್ಪಂದಿರೇನು ಇವರಿಗೆ ಬಿಟ್ಟಿ ಸಿಕ್ಕಿದ್ದಾರಾ? ಬೇಕಾದ್ರೆ ಸಿಎಂ ಅವರಪ್ಪನ ಮೇಲೆ ಆಣೆ ಹಾಕೊಳ್ಳಲಿ.
ಸಿಎಂ ಸ್ಥಾನದ ಘನತೆ ಗೌರವ ಕಡಿಮೆ ಮಾಡಬೇಡಿ. ಬರುವ ಚುನಾವಣೆಯಲ್ಲಿ 133 ಸೀಟುಗಳನ್ನ ತಲುಪುವ ಗುರಿ ನಮ್ಮದಾಗಿದೆ. ಕಾಂಗ್ರೆಸ್ಸಿನ ಈ ರೀತಿಯ ಅಪ ಪ್ರಚಾರಕ್ಕೆ ರಾಜ್ಯ ಸರ್ಕಾರಕ್ಕೆ ಏನಾದ್ರು ಜವಾಬ್ದಾರಿ ಇದೆಯೇ.? ದೀಪಕ್ ಮರ್ಡರ್ ವಿಚಾರ ಕರಾವಳಿಯಲ್ಲಿ ಯಾಕೆ ಈ ರೀತಿ ಗಲಾಟೆಗಳಾಗುತ್ತಿವೆ. ಎಲ್ಲ ಕಡೆಯೂ ಮುಸ್ಲಿಮರಿದ್ದಾರೆ. ಇಲ್ಲೇಕೆ ಗಲಾಟೆಗಳಾಗ್ತಿಲ್ಲ. ಕರಾವಳಿಯಲ್ಲೇ ಯಾಕೆ ಗಲಾಟೆ ಆಗ್ತಿವೆ ಎಂದು ಹೆಚ್‌ಡಿಕೆ ಪ್ರಶ್ನಿಸಿದರು. ಎರಡು ಪಕ್ಷಗಳು ಈ ಪ್ರಕರಣವನ್ನ ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿವೆ. ಸಮಾಜಘಾತುಕ ಶಕ್ತಿಗಳಿಗೆ ಇವರೇ ಪ್ರೋತ್ಸಾಹ ನೀಡ್ತಿದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್, ಬಿಜೆಪಿ ಎರಡು ಒಂದೇ ನಾಣ್ಯದ ಎರಡು ಮುಖಗಳು. ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಕೈ ಜೋಡಿಸಿದ್ರೆ ರಾಜ್ಯದ ರೈತನ 50 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಲಿಕ್ಕೆ ಆಗೋದಿಲ್ಲ. ಅದಕ್ಕಾಗಿನೇ ನಾವು 113ರ ಗುರಿ ಇಟ್ಕೊಂಡು ಹೋಗುತ್ತಿದ್ದೇವೆ. ನೀವು ಸಣ್ಣ ಪುಟ್ಟ ಪ್ರತಿಭಟನೆಗಳನ್ನ ಮಾಡಬೇಡಿ. ನಿಮ್ಮ ಪ್ರತಿಭಟನೆಗಳಿಂದ ಗೋಲಿಬಾರ್‌ಗಳಾಗಬೇಕು ಅಂತ ಅಮಿತ್ ಶಾ ಹೇಳಿದ್ದಾರೆ ಅನ್ನೋ ಪ್ರತಾಪ್ ಸಿಂಹ ಹೇಳಿಕೆ ವೈರಲ್ ಆಗಿದೆ. ಇದೇ ಹೇಳಿಕೆಯನ್ನು ಸಾಮಾನ್ಯ ಪ್ರಜೆ ಹೇಳಿದ್ರೆ ಯಾವೆಲ್ಲಾ ಸೆಕ್ಷನ್‌ಗಳನ್ನ ಹಾಕಿ ಒಳಗೆ ಹಾಕ್ತಿದ್ರು. ಈಗ್ಯಾಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದರು.
Comments