ಕಲ್ಲಿದ್ದಲು ಹಂಚಿಕೆಯಲ್ಲಿ ರಾಜ್ಯಕ್ಕೆ ತಾರತಮ್ಯ : ಡಿ ಕೆ ಶಿವಕುಮಾರ್
ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು ಗಣಿ ಹಂಚಿಕೆ ಕುರಿತಂತೆ ಕೇಂದ್ರ ಇಂಧನ ಸಚಿವ ಪೀಯುಷ್ ಗೋಯಲ್ ಸಹ ಸುಳ್ಳು ಆರೋಪ ಮಾಡಿದ್ದಾರೆ.
ಪ್ರತಿ ಹಂತದಲ್ಲೂ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಬಾರಿ ಕೇಂದ್ರ ಇಂಧನ ಸಚಿವರ ಭೇಟಿಗೆ ಯತ್ನಿಸಿದ್ದೆವು. ಪತ್ರವನ್ನೂ ಸಹ ಬರೆದಿದ್ದೇವೆ. ಇಲಾಖೆ ವತಿಯಿಂದ 55 ಬಾರಿ ಸಂಪರ್ಕಿಸುವ ಪ್ರಯತ್ನ ನಡೆದಿದೆ. ಆದರೆ, ಯಾವುದಕ್ಕೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದ ಕಲ್ಲಿದ್ದಲು ಸಚಿವರನ್ನು ಒಮ್ಮೆ ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಂಡು ಹೋಗಿ ಒಂದೂವರೆ ಗಂಟೆ ಕಾಲ ಕಾದರೂ ಭೇಟಿಯಾಗಲಿಲ್ಲ. ಅಲ್ಲಿಂದ ನಿರಾಶರಾಗಿ ಹಿಂದಿರುಗಬೇಕಾಯಿತು ಎಂದು ವಿವರಿಸಿದರು. ಮಹಾರಾಷ್ಟ್ರ , ರಾಜ್ಯಕ್ಕೆ ಹಂಚಿಕೆ ಮಾಡಲಿರುವ ಕಲ್ಲಿದ್ದಲನ್ನು ಸಂಧಾನ ಅಥವಾ ಟೆಂಡರ್ ಮೂಲಕ ಪಡೆಯಬೇಕೆ ಎಂಬ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ವಿವಾದವಿದೆ. ಇದು ಅಂತಿಮವಾಗುವವರೆಗೂ ಖರೀದಿಗೆ ತೊಂದರೆಯಾಗಲಿದೆ. ಇದರ ನಡುವೆ ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿ ರದ್ದು ಮಾಡುವ ಬಗ್ಗೆ ನೋಟಿಸ್ ನೀಡಿದೆ ಎಂದು ಹೇಳಿದರು. ಕರ್ನಾಟಕಕ್ಕೆ 119.57 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಮಂಜೂರಾಗಿದ್ದರೂ ಇದುವರೆಗೂ 63.9 ಲಕ್ಷ ಮೆಟ್ರಿಕ್ ಟನ್ ಮಾತ್ರ ಕಲ್ಲಿದ್ದಲು ಪೂರೈಸಲಾಗಿದೆ. ಉಳಿದ 53.1 ಲಕ್ಷ ಮೆಟ್ರಿಕ್ ಟನ್ ನಮಗೆ ಸರಬರಾಜು ಮಾಡಿಲ್ಲ.
ಜನವರಿಯಿಂದ ಮಾರ್ಚ್‍ವರೆಗೆ 55.7 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇದ್ದು, ಇದರಲ್ಲಿ 45.22 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಸಲಾಗಿದೆ. ಉಳಿದ ಕಲ್ಲಿದ್ದಲು ಪೂರೈಕೆಯಾಗಿಲ್ಲ ಎಂದು ಮಾಹಿತಿ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2.50ರೂ.ಗೆ 1 ಯುನಿಟ್ ಕರೆಂಟ್ ಕೊಡಿಸುತ್ತೇನೆ ಎನ್ನುತ್ತಾರೆ. ಆದರೆ, ನಾನು ಅಖಿಲ ಭಾರತ ಇಂಧನ ಸಚಿವರ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಯಾರೊಬ್ಬರಿಂದಲೂ ಪ್ರತಿಕ್ರಿಯೆ ಬರಲಿಲ್ಲ ಎಂದು ನುಡಿದರು.
Comments