ಈ ಬಾರಿ ಜೆಡಿಎಸ್ 113 ಸೀಟುಗಳನ್ನು ಪಡೆಯುವ ನಂಬಿಕೆಯಿದೆ: ಎಚ್‌ಡಿಕೆ
ನಗರದ ಬೆಳವಣಿಗೆಯಲ್ಲಿ ಜೆಡಿಎಸ್ ಪ್ರಮುಖ ಪಾತ್ರವನ್ನು ವಹಿಸಿದೆ, ಆದರೆ ಇಲ್ಲಿ ಉತ್ತರ ಭಾರತೀಯರು ಹೆಚ್ಚಾಗಿರುವ ಪರಿಣಾಮ ನಮ್ಮ ಕೆಲಸವನ್ನು ಯಾರೂ ಗುರುತಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಲ ಮಾಧ್ಯಮಗಳು ನಡೆಸಿದ ಚುನಾವಣಾ ಸಮೀಕ್ಷೆಯಲ್ಲಿ ಜೆಡಿಎಸ್ ಕೇವಲ 45 ಸೀಟ್‌ಗಳನ್ನಷ್ಟೇ ಪಡೆಯಬಹುದು ಎಂದು ಹೇಳಿದ್ದರು. ಆದರೆ ನಾವು ಈ ಬಾರಿ ಬೆಂಗಳೂರು ಸೇರಿ 113 ಸೀಟುಗಳನ್ನು ಪಡೆಯುತ್ತೇವೆ ಎಂಬ ನಂಬಿಕೆಯಿದೆ. ಹೀಗಾಗಿ ನಾವು ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಸರಕಾರ ರಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಬೆಂಗಳೂರು ನಗರದ ಪ್ರಗತಿಯಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿರುವ ಎಚ್‌ಡಿಕೆ, ನಮ್ಮ ಸಾಧನೆಯಲ್ಲಿ ಬೆಂಗಳೂರಿಗರು ಮಾತ್ರಾ ಗುರುತಿಸಿಲ್ಲ. ಇದಕ್ಕೆ ಕಾರಣ ಇಲ್ಲಿ ಅತೀಯಾಗಿ ಉತ್ತರ ಭಾರತೀಯರು ಸೇರಿಕೊಂಡಿದ್ದಾರೆ. ಆದರೆ ಇದು ಹೀಗೆಯೇ ಮುಂದುವರಿದರೆ ಮಾರಕವಾಗಿಯೂ ಪರಿಣಮಿಸಬಹುದು ಎಂದು ಹೇಳಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾವು ಹಿರೀಯ ನಾಗರೀಕರಿಗೆ ಹೆಚ್ಚಿನ ಮನ್ನಣೆ ನೀಡುತ್ತೇವೆ. ಅಲ್ಲದೇ ತಾತ್ಕಾಲಿಕ ಉದ್ಯೋಗ ಸಮಸ್ಯೆಗೆ ಪೂರ್ಣ ವಿರಾಮ ಹಾಕುತ್ತೇವೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಐದು ಲಕ್ಷ ಉದ್ಯೋಗ ಸೃಷ್ಠಿಗೂ ಶ್ರಮವಹಿಸುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಮುಂದಿನ ಐದು ವರ್ಷ ನನ್ನ ಜೀವನದಲ್ಲೇ ನಿರ್ಣಾಯಕ ವರ್ಷವಾಗಲಿದ್ದು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಿರೀಯ ನಾಗರೀಕರಿಗೆ ಉಚಿತ ಪಾಸ್ ಸೇರಿದಂತೆ, ಆಸ್ಪತ್ರೆಗೆ ಸರಕಾರಿ ಶಾಲೆಗಳ ಅಭಿವೃದ್ಧಿಗೂ ಶ್ರಮಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
Comments