ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಮೌನವೇಕೆ? : ಎಚ್ ಡಿಕೆ

ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಹದಾಯಿ ನೀರು ಅಮಿತ್ ಶಾ, ಮನೋಹರ ಪರಿಕ್ಕರ್, ಯಡಿಯುರಪ್ಪನವರ ಆಸ್ತಿಯಲ್ಲ. ರಾಜ್ಯದ ಜನತೆಯ ನ್ಯಾಯಯುತ ಪಾಲು. ಒಕ್ಕೂಟ ವ್ಯವಸ್ಥೆಯಲ್ಲಿ ಅದನ್ನು ಕೊಡಿಸಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಮಹದಾಯಿ ನೀರು ರಾಜ್ಯಕ್ಕೆ ಹರಿಯಬೇಕಾದರೆ ನಿರ್ಧಾರ ಕೈಗೊಳ್ಳಬೇಕಾಗಿರುವುದು ಈ ದೇಶದ ಪ್ರಧಾನಮಂತ್ರಿ. ಇದುವರೆಗೂ ಅವರು ಯಾಕೆ ಆ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಮನೋಹರ ಪರಿಕ್ಕರ್ ಪತ್ರ ಬರೆದಿದ್ದು ಇದೊಂದು ನಾಟಕ. ಇದೇ ಪರಿಕ್ಕರ್ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಮಹದಾಯಿ ತಿರುವು ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾಗ ಒಂದೇ ಒಂದೇ ಹನಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಹಠ ಹಿಡಿದು ಬಹಿರಂಗವಾಗಿ ಹೇಳಿಕೆ ನೀಡಿದ್ದರು ಎಂದು ದೂರಿದರು.ರಾಜ್ಯ ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂಬ ಪರಿಕ್ಕರ್ ಹೇಳಿಕೆ ಬಗ್ಗೆ ಗರಂ ಆದ ಕುಮಾರಸ್ವಾಮಿ, ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಅವರ್ಯಾರು. ಆಯಾ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಹದಿನೈದು ಪತ್ರ ಬರೆದಿದ್ದರೂ ಸ್ಪಂದಿಸದ ಇವರು ಯಡಿಯೂರಪ್ಪನ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಅದೂ ಮಾತುಕತೆಗೆ ಸಿದ್ಧ ಎಂದು ಮಾತ್ರ. ಇದರಿಂದ ನೀರು ಬರುತ್ತಾ? ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ. ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Comments