ಯಡಿಯೂರಪ್ಪಹಾಗೂ ಕುಮಾರಸ್ವಾಮಿ ಜನರಿಗೆ ಏನನ್ನೂ ಮಾಡಲಿಲ್ಲ : ಡಿಕೆಶಿ ಟೀಕೆ
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸಿದ ದುರಾಡಳಿತದಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಡಿಯೂರಪ್ಪಹಾಗೂ ಕುಮಾರಸ್ವಾಮಿ ಜನರಿಗೆ ಏನನ್ನೂ ಮಾಡಲಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟೀಕಾ ಪ್ರಹಾರ ನಡೆಸಿದರು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಜನರನ್ನು ಯಾಮಾರಿಸುವ ಪ್ರಯತ್ನ ನಡೆಸಿದ್ದಾರೆ. ಈ ರಾಜ್ಯದ ಜನರು ಅವರ ದುರಾಡಳಿತ ನೋಡಿದ್ದಾರೆ. ಹಾಗಾಗಿ ಅವರನ್ನು ನಂಬಲ್ಲ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟೀಕಾ ಪ್ರಹಾರ ನಡೆಸಿದರು. ಈಗ ನಾವು ಏನೋ ಕಡಿದು ಕಟ್ಟೆ ಹಾಕುತ್ತೇವೆ ಎಂದು ಜನರನ್ನು ಯಾಮಾರಿಸುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕ ಅಭಿವೃದ್ಧಿ ಶೀಲ ರಾಜ್ಯ.
ಈ ಹಿಂದಿನ ಬಿಜೆಪಿ ಸರ್ಕಾರ ಜನರನ್ನು ಕತ್ತಲಲ್ಲಿ ಇಟ್ಟಿತ್ತು. ಆದರೆ, ನಾವು ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. ಬೀಜ, ಗೊಬ್ಬರ ಕೇಳಿದ ರೈತರಿಗೆ ಗುಂಡೇಟು ನೀಡಿದ ಸರಕಾರ ಬಿಜೆಪಿಯದು. ಆದರೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ರಾಜ್ಯಗಳಲ್ಲಿ ನುಡಿದಂತೆ ನಡೆದ ಸರಕಾರ ಇರುವುದು ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಮಾತ್ರ.
Comments