ಗೀತಾ ಶಿವರಾಜ್‍ಕುಮಾರ್ ಜೆಡಿಎಸ್ ನಿಂದ ಕಣಕ್ಕಿಳಿಯುವ ಬಗ್ಗೆ ಮಧು ಬಂಗಾರಪ್ಪ ಹೇಳಿದ್ದೇನು?

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ರಾಜಕೀಯ ನಾಯಕರು ತಮ್ಮ ಪಕ್ಷದ ಟಿಕೆಟ್ ಪಡೆದುಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಈ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪತ್ನಿ ಹಾಗು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಶಿವರಾಜ್‍ಕುಮಾರ್ ಮತ್ತೊಮ್ಮೆ ಜೆಡಿಎಸ್ ನಿಂದ ಚುನಾವಣಾ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.ಈ ಕುರಿತು ಬಾಗಲಕೋಟೆಯಲ್ಲಿ ಸಹೋದರ ಮತ್ತು ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಆ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿಗಳಿಲ್ಲ. ಸದ್ಯ ಅವರು ನಮ್ಮೊಂದಿಗೆ ಇರುತ್ತಾರೆ. ಗೀತಾ ಶಿವರಾಜ್‍ಕುಮಾರ್ ಅವರ ಮೇಲೆ ಯಾವುದೇ ರಾಜಕೀಯ ಒತ್ತಡಗಳನ್ನು ಹಾಕಲು ಇಚ್ಚಿಸುವುದಿಲ್ಲ ಅಂತಾ ತಿಳಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಿದ್ದೇವೆ. ಒಂದು ವೇಳೆ ಗುಜರಾತಿನಲ್ಲಿ ಮೂರನೇಯ ಒಂದು ಪಕ್ಷವಾಗಿದ್ದರೆ ಜೆಡಿಎಸ್ ಅಧಿಕಾರಕ್ಕೆ ಬರುತ್ತಿತ್ತು. ಬಿಜೆಪಿ ಪರಿವರ್ತನಾ ಸಮಾವೇಶ ಯಾವುದೇ ಒಂದು ನಿರ್ದಿಷ್ಟ ಅಜೆಂಡಾ ಹೊಂದಿಲ್ಲ. ಸಮಾವೇಶದಲ್ಲಿ ಕೇವಲ ಕಾಂಗ್ರೆಸ್‍ಗೆ ಬೈಯುವ ಉದ್ದೇಶವನ್ನು ಹೊಂದಿದೆ. ಈ ಪರಿವರ್ತನಾ ರ್ಯಾಲಿ ಮೂಲಕ ಬಿಜೆಪಿ ಅವರ ಮನ ಪರಿವರ್ತನೆಯಾದರೆ ಸಾಕು ಎಂದು ಮಧು ಬಂಗಾರಪ್ಪ ವ್ಯಂಗ್ಯ ಮಾಡಿದರು.ಅತೃಪ್ತ ಶಾಸಕರು ಪಕ್ಷ ಬಿಟ್ಟು ಹೊರ ಬಂದಿದ್ದರಿಂದ ಪಕ್ಷ ಮತ್ತಷ್ಟು ಬೆಳೆದಿದೆ. ಅವರಿಂದ ದೂರ ಉಳಿಯುವುದು ಉತ್ತಮ ಕೆಲಸವಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಟಿಕೆಟ್ ಆಪೇಕ್ಷ ಪಡೋದರಲ್ಲಿ ಯಾವುದೇ ತಪ್ಪಿಲ್ಲ. ಈ ಬಗ್ಗೆ ಪಕ್ಷದ ಮುಖಂಡರು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ ಅಂತಾ ತಿಳಿಸಿದರು.
2014ರ ಲೋಕಸಭಾ ಚುನವಾಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸೋಲನ್ನು ಅನುಭವಿಸಿದ್ದರು. ಗೀತಾ ಶಿವರಾಜ್‍ಕುಮಾರ್ ಪರವಾಗಿ ಇಡೀ ಸ್ಯಾಂಡಲ್‍ವುಡ್ ಟೀಂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.ಈ ಚುನಾವಣೆಯಲ್ಲಿ ಬಿಎಸ್‍ವೈ ಪರ 6,06,216 ಮತಗಳು ಬಿದ್ದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಂಜುನಾಥ ಭಂಡಾರಿ 2,42,911 ಮತಗಳಿಸಿದ್ದರು. ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್ 2,40,636 ಮತಗಳನ್ನು ಪಡೆದಿದ್ದರು.
Comments