ಜೆಡಿಎಸ್ ಅಧಿಕಾರಕ್ಕೆ ತರಲು ಎಚ್ ಡಿಕೆ ಮಾಸ್ಟರ್ ಪ್ಲಾನ್
ವಿಧಾನಪರಿಷತ್ ಸದಸ್ಯರಿಗೆ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ನೀಡಲು ಜೆಡಿಎಸ್ ಶಾಸಕಾಂಗ ಪಕ್ಷ ತೀರ್ಮಾನಿಸಿದೆ.
ಪಕ್ಷದ 13 ವಿಧಾನಪರಿಷತ್ ಸದಸ್ಯರಿದ್ದು ರಾಮನಗರ ಮತ್ತು ಹಾಸನ ಹೊರತುಪಡಿಸಿ ಪ್ರತಿಯೊಬ್ಬರಿಗೆ ಎರಡೆರೆಡು ಲೋಕಸಭೆ ಕ್ಷೇತ್ರದ ಉಸ್ತುವಾರಿ ವಹಿಸಲು ನಿರ್ಧರಿಸಿದೆ.ಜತೆಗೆ ಹಾಲಿ 33 ಶಾಸಕರಿಗೂ ಅವರವರ ಕ್ಷೇತ್ರಗಳ ಜತೆ ಅಕ್ಕ -ಪಕ್ಕದ ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಲು ತೀರ್ಮಾನಿಸಲಾಗಿದೆ.
ಜೆಡಿಎಸ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮುಂದಿನ ಮೂರೂವರೆ ತಿಂಗಳಲ್ಲಿ ಎದುರಾಗುವ ವಿಧಾನಸಭೆ ಚುನಾವಣೆಯನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಿದ್ದು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯರಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲು ಹಾಗೂ ಹಾಲಿ ಶಾಸಕರಿಗೆ ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಧಾನಪರಿಷತ್ ಸದಸ್ಯರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಹೀಗಾಗಿ, ಅವರು ವಿಧಾನಸಭೆ ಚುನಾವಣೆಯಲ್ಲಿ ಎರಡು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಗೆ ಬರುವ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.ಜನವರಿ ಮೊದಲ ವಾರದಿಂದ ಕರ್ನಾಟಕ ವಿಕಾಸವಾಹಿನಿ ಯಾತ್ರೆ ಮತ್ತೆ ಪುನರಾರಂಭವಾಗಲಿದ್ದು, ಅದು ಚುನಾವಣೆವರೆಗೂ ನಿರಂತರವಾಗಿ ನಡೆಯಲಿದೆ. ಯಾತ್ರೆಯ ಜತೆಗೆ ರಾಜ್ಯ ಪ್ರವಾಸಕ್ಕೆ ಪಕ್ಷದ ನಾಯಕರ ತಂಡವನ್ನೂ ರಚಿಸಲಾಗಿದೆ ಎಂದು ಹೇಳಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಗುಜರಾತ್ ಚುನಾವಣೆ ಫಲಿತಾಂಶದ ನಂತರ ರಾಜ್ಯದ ರಾಜಕೀಯ ವಿದ್ಯಮಾನಗಳು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರ, ಸಿದ್ದರಾಮಯ್ಯ ಅವರ ಸಾಧನಾ-ಸಂಭ್ರಮ ಯಾತ್ರೆ ಹಾಗೂ ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆಯಿಂದ ಆ ಎರಡೂ ಪಕ್ಷಗಳಿಗೆ ಆಗುವ ಲಾಭ-ನಷ್ಟ ಮತ್ತಿತರ ವಿಚಾರಗಳ ಬಗ್ಗೆಯೂ ಚರ್ಚಿಸಲಾಯಿತು.ಗುಜರಾತ್ ಚುನಾವಣೆ ನಂತರ ಜೆಡಿಎಸ್ ರಣತಂತ್ರ ಬದಲಿಸಬೇಕಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ನಿರ್ಲಕ್ಷ್ಯ ಮಾಡಿರುವ ಅಹಿಂದ ವರ್ಗದ ಸಮುದಾಯಗಳನ್ನು ಓಲೈಸಲು ಕಾರ್ಯತಂತ್ರ ರೂಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.
Comments