ವಿದ್ಯುತ್ ಕೊರತೆ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕೈಕೊಳ್ಳಲಾಗಿದೆ : ಡಿಕೆಶಿ
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್‌ನಡಿ ವಿದ್ಯುತ್ ಕಡಿತ ಮಾಡುವುದಿಲ್ಲ. ವಿದ್ಯುತ್ ಕೊರತೆ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಬೇಸಿಗೆಯಲ್ಲಿ ರೈತರು, ಉದ್ದಿಮೆದಾರರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿದೆ. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ. ಬೇಸಿಗೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲ ವಲಯಕ್ಕೂ ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಒದಗಿಸಲು ಬದ್ಧ ಎಂದು ಹೇಳಿದರು. ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಹಾಗಾಗಿ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಗಾಗಿ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ. ಅಧಿಕಾರಿಗಳು ಸಹ ನಿರಂತರ ಸಂಪರ್ಕದಲ್ಲಿದ್ದು, ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು. ವಿದೇಶಿ ಕಲ್ಲಿದ್ದಲು ಆಮದು ಈ ನಡುವೆ ತುರ್ತು ನಿರ್ವಹಣೆಗಾಗಿ ಒಂದು ದಶಲಕ್ಷ ಟನ್ ವಿದೇಶಿ ಕಲ್ಲಿದ್ದಲು ಖರೀದಿಗೆ ಟೆಂಡರ್ ಆಹ್ವಾನಿಸಲಾಗಿದೆ. ಒಂದೊಮ್ಮೆ ಕಲ್ಲಿದ್ದಲು ಕೊರತೆಯಿಂದ ಸಮಸ್ಯೆ ತಲೆದೋರಿದರೆ ತಕ್ಷಣವೇ ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗುವಂತೆ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Comments