ಹೊರೆ ಹೊರುತ್ತಾರಾ ಕಿಚ್ಚ ಸುದೀಪ್?
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಾಲೀಮು ಆರಂಭಿಸಿರುವ ಜೆಡಿಎಸ್ ಪಕ್ಷಕ್ಕೆ ತಾರಾ ಮೆರಗು ತರಲು ಕಿಚ್ಚ ಸುದೀಪ್‌ಗೆ ಗಾಳ ಹಾಕಿದೆ. ಪಕ್ಷ ಸೇರುವಂತೆ ಅಧಿಕೃತವಾಗಿ ಆಹ್ವಾನವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಹೌದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಚ್ಚ ಸುದೀಪ್‌ರನ್ನು ಪಕ್ಷಕ್ಕೆ ಕರೆ ತರಲು ಪ್ರಯತ್ನಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಬಲವರ್ಧನೆಗೆ ಸುದೀಪ್ ತಾರಾಬಲ ಸಹಕಾರಿಯಾಗಲಿದೆ ಎನ್ನುವ ನಿರೀಕ್ಷೆಯೊಂದಿಗೆ ಪಕ್ಷ ಸೇರುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.ಇತ್ತೀಚೆಗೆ ಕುಮಾರಸ್ವಾಮಿ ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿರುವ ಸುದೀಪ್ ಅವರು ಎಚ್ ಡಿಕೆ ಹುಟ್ಟು ಹಬ್ಬದಂದು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಶುಭ ಕೋರಿ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆಹ್ವಾನಕ್ಕೆ ಮನ್ನಣೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಸುದೀಪ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಕೈಯಾರೆ ಅಡುಗೆ ಮಾಡಿ ಕಿಚ್ಚ ಕುಮಾರಸ್ವಾಮಿಯವರಿಗೆ ಆತಿಥ್ಯ ನೀಡಿದ್ದರು.
ಈ ಭೇಟಿ ವೇಳೆ ರಾಜ್ಯ ರಾಜಕಾರಣ, ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಕುರಿತು ಸದೀಪ್ ಹಾಗೂ ಕುಮಾರಸ್ವಾಮಿ ಕೆಲಕಾಲ ಮಾತುಕತೆ ನಡೆಸಿದ್ದರು. ರಾಜಕೀಯ ಕ್ಷೇತ್ರದ ಕಡೆ ಸುದೀಪ್ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಇದೀಗ ರಾಜಕೀಯ ಕ್ಷೇತ್ರ ಪ್ರವೇಶಿಸಿ, ಜೆಡಿಎಸ್ ಪಕ್ಷಕ್ಕೆ ಬನ್ನಿ ಎಂದು ಸುದೀಪ್‌ಗೆ ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ.ಸುದೀಪ್ ತಂದೆ ಸರೋವರ್ ಸಂಜೀವ್ ಕುಟುಂಬ ಜನತಾ ಪರಿವಾರದ ಜೊತೆ ಗುರುತಿಸಿಕೊಂಡಿದ್ದು ಜೆಡಿಎಸ್ ಕಡೆಯೂ ಗುರುತಿಸಿಕೊಂಡಿತ್ತು. ಹೀಗಾಗಿ ಕಿಚ್ಚ ಸುದೀಪ್‌ರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನಕ್ಕೆ ಕೈಹಾಕಲಾಗಿದೆ ಎಂದು ತಿಳಿದುಬಂದಿದೆ.ಜೆಡಿಎಸ್ ಆಹ್ವಾನ ಕುರಿತು ಸುದೀಪ್ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೆ ಆಹ್ವಾನ ಕುರಿತು ಯಾವುದೇ ಮಾಹಿತಿಯನ್ನೂ ಅವರು ನೀಡಿಲ್ಲ. ರಾಜಕೀಯ ಕ್ಷೇತ್ರ ಪ್ರವೇಶ ಹಾಗೂ ಜೆಡಿಎಸ್ ಸೇರ್ಪಡೆ ಕುರಿತು ಸುದೀಪ್ ಇನ್ನೂ ಮೌನ ಮುರಿಯದಿರುವುದು ರಾಜ್ಯ ರಾಜಕೀಯ ಪಾಳೆಯದಲ್ಲಿ ಕುತೂಹಲ ಮೂಡಿಸಿದೆ.
Comments