ಜಿ.ಟಿ ದೇವೇಗೌಡ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನೇರವಾಗಿ ಚುನಾವಣೆ ಎದುರಿಸುವ ಸಾಮರ್ಥ್ಯವಿಲ್ಲದೆ ಅವರ ವಿರುದ್ಧ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡರನ್ನು ಬ್ಲಾಕ್‍ಮೇಲ್ ಮಾಡುತ್ತಿರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದರು.
ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಅಭ್ಯರ್ಥಿಗೆ ಭಯ ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗುವುದು ಶತಸಿದ್ಧ ಎಂದು ಭವಿಷ್ಯ ನುಡಿದ ಕುಮಾರಸ್ವಾಮಿಯವರು, ಜಿಟಿ ದೇವೇಗೌಡರು ತೊಡೆ ತಟ್ಟಿ ನಿಂತಿದ್ದಾರೆ. ಅವರನ್ನು ಜೈಲಿಗೆ ಕಳುಹಿಸಿ ನೋಡೋಣ. ಜೈಲಿನಿಂದಲೇ ಚುನಾವಣೆ ಎದುರಿಸುತ್ತಾರೆ. ಬಳಿಕ ನಿಮ್ಮನ್ನು ಜೈಲಿಗೆ ಕಳುಹಿಸುವುದು ಗೊತ್ತು ಎಂದು ಸಿಎಂ ವಿರುದ್ಧ ತೊಡೆ ತಟ್ಟಿದರು.ಲೆಕ್ಕ ತೋರಿಸದೆ 10 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಸಾಗಾಟ ಮಾಡಿದ್ದಾರೆ. ಇದರಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಸ್ತಕ್ಷೇಪ ಇದೆ. ಈ ಹಗರಣವನ್ನ ಶೀಘ್ರದಲ್ಲಿ ಬಯಲು ಮಾಡುವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಸಿದ ಕುಮಾರ ಪರ್ವ ಯಶಸ್ವಿಯಾಗಿದ್ದರಿಂದ ವಿಚಲಿತರಾದ ಮುಖ್ಯಮಂತ್ರಿ ಅಂದೇ ಸಭೆ ನಡೆಸಿ ಲೋಕಾಯುಕ್ತ ತನಿಖೆಗೆ ವಹಿಸಲಾಗಿದ್ದ ಮೈಸೂರಿನ ವಸತಿ ಯೋಜನೆಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕರಣವನ್ನು ಎಸಿಬಿಗೆ ವಹಿಸಲು ತೀರ್ಮಾನಿಸಿದ್ದಾರೆ. ನಿನ್ನೆ ಎಸಿಬಿಯಿಂದ ಆ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಮಂದಿ ವಿರುದ್ಧ ಎಫ್‍ಐಆರ್ ಹಾಕಲಾಗಿದೆ. ವಿರೋಧಿಗಳನ್ನು ಬಗ್ಗು ಬಡಿಯಲು ಎಸಿಬಿ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ತಮ್ಮ ವಿರುದ್ಧ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ಕಾಂಗ್ರೆಸ್‍ಗೆ ಬಂದರೆ ಎಂಎಲ್‍ಸಿ ಮಾಡುವ ಭರವಸೆಯನ್ನು ನಮ್ಮ ಪಕ್ಷದ ಅಭ್ಯರ್ಥಿಗೆ ನೀಡಿದ್ದಾರೆ. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬ್ಲಾಕ್‍ಮೇಲ್ ಮಾಡಿದ್ದಾರೆಂದು ಹೇಳಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಯೋಜನೆ ಬಗ್ಗೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅದರ ಬಗ್ಗೆ ತನಿಖೆ ನಡೆದು ಮುಖ್ಯ ಕಾರ್ಯದರ್ಶಿ ವರದಿಯನ್ನೂ ಕೊಟ್ಟಿದ್ದಾರೆ. ಯೋಜನೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಹಣವೂ ಸಂದಾಯವಾಗಿದೆ. 2014ರಲ್ಲೇ ಲೋಕಾಯುಕ್ತ ತನಿಖೆಗೆ ಆದೇಶ ಮಾಡಿ ಇಲ್ಲಿಯವರೆಗೂ ಆ ಪ್ರಕರಣ ಮುಚ್ಚಿಟ್ಟುಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು.
ಬೆಂಗಳೂರು ಹಾಲಿನ ಡೈರಿಯ ಘಟಕ ಸ್ಥಾಪನೆಯೊಂದಕ್ಕೆ ಕನಕಪುರದ ಬಳಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಅಲ್ಲಿ ಜಿಪಿಎದಾರರು ರೈತರಿಂದ ಕಡಿಮೆ ಬೆಲೆಗೆ ಜಮೀನು ಪಡೆದು ದುಬಾರಿ ಬೆಲೆಗೆ ಮಾರಾಟ ಮಾಡಿಲ್ಲವೆ? ಇಂತಹ ಎಷ್ಟು ಪ್ರಕರಣಗಳ ಉದಾಹರಣೆ ನೀಡಲಿ ಎಂದು ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದರು. ಆದರೆ, ರಾಜ್ಯ ಸರ್ಕಾರವೇ ಎಸಿಬಿ ಮುಂದಿಟ್ಟುಕೊಂಡು ಮಾಡುತ್ತಿರುವುದು ಅಧಿಕಾರದ ದುರ್ಬಳಕೆಯಲ್ಲವೆ ಎಂದ ಅವರು, ಬಿಜೆಪಿ ನಾಯಕರನ್ನು ಟೀಕಿಸುವ ನೈತಿಕತೆ ನಿಮಗೆ ಇಲ್ಲ ಎಂದು ಹೇಳಿದರು.
Comments