ಎಚ್ ಡಿಕೆ ಹುಟ್ಟುಹಬ್ಬಕ್ಕೆ ರೈತರಿಗೆ ಒಕ್ಕಣೆ ಯಂತ್ರ ವಿತರಣೆ




ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಅಭಿಮಾನಿಗಳು, ಕಾರ್ಯಕರ್ತರು, ಸಡಗರ ಸಂಭ್ರಮದಿಂದ ಆಚರಿಸಿದರು.
ನಗರದ ಜೆಡಿಎಸ್ ಕಚೇರಿಗೆ ತೆರಳಿದ ಎಚ್.ಡಿ.ಕುಮಾರಸ್ವಾಮಿ ಅವರು, ಅಲ್ಲಿ ಇಂದಿನಿಂದ ನೂತನವಾಗಿ ಆರಂಭವಾದ ಅಪ್ಪಾಜಿ ಕ್ಯಾಂಟೀನ್‍ಗೆ ಚಾಲನೆ ನೀಡಿದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಅಲ್ಲಿಯೂ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಣ್ಣು ಹಾಗೂ ವಸ್ತ್ರಗಳನ್ನು ವಿತರಿಸಲಾಯಿತು. ತಮ್ಮ ಮೇಲೆ ರಚಿಸಲಾಗಿರುವ ಗೀತೆಯ ಹಾಡುಗಳಿರುವ ಧ್ವನಿಸುರುಳಿಯನ್ನು ಸಹ ಬಿಡುಗಡೆ ಮಾಡಿದ ಕುಮಾರಸ್ವಾಮಿಯವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಪಿ.ಮುನೇಗೌಡ ಅವರು ರೈತರ ರಾಗಿ ಒಕ್ಕಣೆಗೆ ಉಚಿತವಾಗಿ ನೀಡುತ್ತಿರುವ ಯಂತ್ರಗಳನ್ನು ವಿತರಿಸಿದರು.
ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಕ್ಷೇತ್ರದ ರೈತರಿಗೆ ಒಕ್ಕಣೆ ಯಂತ್ರಗಳನ್ನು ವಿತರಿಸಲಾಗಿದ್ದು, ಇದರಿಂದ 2 ಲಕ್ಷ ರೈತರಿಗೆ ರಾಗಿ ಒಕ್ಕಣೆಗೆ ಅನುಕೂಲವಾಗಲಿದೆ. ಗೊಲ್ಲರಹಟ್ಟಿ ಬಳಿ ನಡೆದ ಕಾರ್ಯಕ್ರಮದಲ್ಲಿ ಪುತ್ರ ನಿಖಿಲ್ ಅಭಿನಯದ ಕುರುಕ್ಷೇತ್ರ ಚಿತ್ರದ ಟೀಸರ್‍ನ್ನು ಬಿಡುಗಡೆ ಮಾಡಿದರು. ಈ ವೇಳೆ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಗೆಳೆಯರು, ಹಿತೈಷಿಗಳು, ಕಾರ್ಯಕರ್ತರೂ ಸೇರಿದಂತೆ ಹಲವರು ಹೂಗುಚ್ಛ ನೀಡಿ ಶುಭಾಶಯ ಕೋರಿದರು.
ನಗರದ ಯುವ ಜೆಡಿಎಸ್ ಪಕ್ಷದ ವತಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಡಿ.ಯಶೋಧರ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಡೀ ರಾಜ್ಯದ ಬಡವರು ಅಲ್ಪಸಂಖ್ಯಾತರು ಹಿಂದುಳಿದವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಜಾತಿ ಮತ ಬೇಧವಿಲ್ಲದೇ ಇಡೀ ರಾಜ್ಯದ ಅಭಿವೃದ್ಧಿಗಾಗಿ ಯೋಜನೆಗಳನ್ನು ಹಾಕಿಕೊಂಡು ನಮ್ಮ ಕರ್ನಾಟಕ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಮಾಜಿ ಸಚಿವರಾಜ ಎಚ್.ಡಿ.ರೇವಣ್ಣನವರು ಕ್ಷೀರ ಕ್ರಾಂತಿಯ ಹರಿಕಾರರು ರಾಜ್ಯದ ಅಭಿವೃದ್ಧಿಯ ಚಿಂತಕರು ಎಂದು ತಿಳಿಸಿದರು. ಅಲ್ಲದೇ ಮುಂಬರುವ ವಿದಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಬೆಂಬಲಿಸಬೇಕೆಂದು ಮನವಿ ಮಾಡಿದರು ಮುಖಂಡರಾದ ಎ.ಪಾಂಡುರಂಗ, ಸೈಯದ್‍ಸಲಾವುದ್ದೀನ್, ಕಂದೀಕೆರೆ ರಂಗನಾಥ್, ನಂದಿಹಳ್ಳಿಗಿರಿಜಪ್ಪ, ಬಿ. ಎಚ್.ಮಂಜುನಾಥ್, ಸತ್ಯನಾರಾಯಣಚಾರ್, ಶಂಕರ್‍ಭಾಗವತ್, ಶಂಕರಮೂರ್ತಿ,ಗುಣಶೇಖರ್. ಕಾ. ಶಾಮಯ್ಯ. ಷಾಬುದ್ದೀನ್, ದೊಡ್ಡರಂಗಪ್ಪ ಉಪಸ್ಥಿತರಿದ್ದರು.
Comments