59ರ ವಸಂತಕ್ಕೆ ಕಾಲಿಟ್ಟ ಎಚ್.ಡಿ.ಕುಮಾರಸ್ವಾಮಿ




ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶನಿವಾರ 59ನೇ ಹುಟ್ಟಹಬ್ಬ ಆಚರಿಸಿಕೊಂಡರು.
59ರ ವಸಂತಕ್ಕೆ ಕಾಲಿಟ್ಟಿರುವ ಕುಮಾರಸ್ವಾಮಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೇಕ್ ತಿನ್ನಿಸುವ ಮೂಲಕ ಶುಭಕೋರಿದರು.ಪಿಜಿಆರ್ ಸಿಂಧ್ಯಾ, ಎಚ್.ವಿಶ್ವನಾಥ್, ಎಚ್.ಡಿ.ರೇವಣ್ಣ , ಟಿ.ಎ.ಶರವಣ ಸೇರಿ ಪಕ್ಷದ ಹಲವು ಪ್ರಮುಖರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.ಕುಮಾರಸ್ವಾಮಿ ಹಾಗೂ ಅವರ ಕುಟುಂಬ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆರ್ಶೀವಾದ ಪಡೆದರು. ಸ್ವಾಮೀಜಿಯವರು ಶಾಲು ಹೊದಿಸಿ ಎಚ್ ಡಿಕೆ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ನಾಡಿನ ಸೇವೆ ಮಾಡುವಂತೆ ಆರೋಗ್ಯ, ಮನಸ್ಸನ್ನು ಭಗವಂತ ಕರುಣಿಸಲಿ. ಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಕಾಲಭೈರವೇಶ್ವರನ ಆಶೀರ್ವಾದವಿರಲಿ ಎಂದರು.ಇದಕ್ಕೂ ಮುನ್ನ ಮಾತನಾಡಿದ ಕುಮಾರಸ್ವಾಮಿಯವರು, ನನ್ನ ಹೃದಯ ಶಸ್ತ್ರಚಿಕಿತ್ಸೆ ಬಳಿಕ ಇದು ನನ್ನ ಎರಡನೇ ಜನ್ಮ. ಈ ಬದುಕನ್ನು ನಾಡಿನ ಜನತೆಯ ಸೇವೆಗೆ ಮುಡಿಪಿಡುತ್ತೇನೆ. ವಿಶೇಷವಾದ ವರ್ಷ. ಜನತೆ ಆರ್ಶೀವಾದದಿಂದ 2018 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ನಾಡಿನ ಸಂಕಷ್ಟದ ಬಗ್ಗೆ ದೊಡ್ಡ ಮಟ್ಟದ ಅರಿವಿಟ್ಟುಕೊಂಡಿದ್ದೇನೆ ಎಂದು ಹೇಳಿದರು.
ನಮ್ಮ ಸರ್ಕಾರ ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಿದ್ದೇವೆ. ಯುವಕರಿಗೆ ಉದ್ಯೋಗ ಸೃಷ್ಠಿಸುವಂತಹ ಯೋಜನೆಗಳನ್ನು ರೂಪಿಸಲಿದ್ದೇವೆ ಎಂದರು. ಜನ್ಮದಿನೋತ್ಸವದ ಸಂತಸ ಮತ್ತು ಚುನಾವಣೆ ಎದುರಿಸುವ ಹೊಣೆಯೂ ನಮ್ಮ ಮೇಲಿದೆ. ನಾಡಿನ ಜನತೆಯ ಮುಂದೆ ಭರವಸೆಗಳನ್ನಿಟ್ಟಿದ್ದೇನೆ. ಉತ್ತಮ ಕೆಲಸಗಳನ್ನು ರೂಪಿಸಿದ್ದೇನೆ. ಎಲ್ಲವನ್ನೂ ರೂಪಿಸಲು ಜನತೆ ನಮ್ಮ ಕೈಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು. ಅನಿತಾ ಕುಮಾರಸ್ವಾಮಿ ಮಾತನಾಡಿ, 58 ತುಂಬಿ 59 ಕ್ಕೆ ಕಾಲಿಟ್ಟಿರುವ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳು. ಅವರಿಗೆ ತಾಯಿ ರಾಜರಾಜೇಶ್ವರಿ ಉತ್ತಮ ಆರೋಗ್ಯ ಕೊಡಲಿ. ಮುಂದಿನ ದಿನಗಳಲ್ಲಿ ಜೆಡಿಎಸ್ ಸರ್ಕಾರವನ್ನು ತರುವಂತೆ ರಾಜ್ಯದ ಜನತೆಯ ಮುಂದೆ ಮನವಿ ಮಾಡಿದರು.
Comments