ಜೆಡಿಎಸ್ ಬೃಹತ್ ದಲಿತ ಸಮಾವೇಶದಲ್ಲಿ ಎಚ್ ಡಿಕೆ ಹೇಳಿದ್ದೇನು

ನಗರದ ಅರಮನೆ ಮೈದಾನದಲ್ಲಿ ನಡೆದ ದಲಿತರ ನಡಿಗೆ ಕುಮಾರಣ್ಣನ ಕಡೆಗೆ ದಲಿತ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ನನಗೆ ಜಾತಿಯಿಲ್ಲ, ನನ್ನನ್ನು ಎಲ್ಲಾ ಜಾತಿಯವರು ಪ್ರೀತಿಸ್ತಾರೆ. ಎಲ್ಲಾ ಸಮಾಜವನ್ನು ಗೌರವಿಸುವ ನಡವಳಿಕೆ ನನಗೆ ಕಲಿಸಿಕೊಟ್ಟಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಎಲ್ಲಾ ಸಮುದಾಯದ ತಾಯಂದಿರು ನನಗೆ ಅನ್ನ ಹಾಕಿದ್ದಾರೆ. ಬಿಜೆಪಿ ಆಡಳಿತ ನಡೆಸಿ ರಾಜ್ಯವನ್ನು ಕುಲಗೆಡಿಸಿದ್ರು, ಈಗ ಕಾಂಗ್ರೆಸ್ ಕೂಡ ಅದೇ ಹಾದಿಯಲ್ಲಿ ಸಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ 10 ವರ್ಷ ಅವಕಾಶ ನೀಡಿದ್ದೀರಾ. ನಮ್ಮನ್ನು ಒಮ್ಮೆ ಪರೀಕ್ಷಿಸಿ. ನಮಗೆ ಒಂದು ಅವಕಾಶ ನೀಡಿ. ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಿದ್ದಾಗಿ ಹೇಳ್ತಾರೆ. ಇದುವರೆಗೆ ಬಿಡಿಗಾಸನ್ನೂ ರೈತರ ಸಾಲ ಮನ್ನಾಕ್ಕೆ ನೀಡಿಲ್ಲ, ಕೇವಲ ಘೋಷಣೆ ಅಷ್ಟೆ ಎಂದರು.ಚುನಾವಣೆ ಫಲಿತಾಂಶ ಬರೋವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ಚುನಾವಣೆಗೆ ಇನ್ನೂ ಮೂರು ಅಥವಾ ಮೂರುವರೆ ತಿಂಗಳು ಬಾಕಿ ಇದೆ. ಹಾಗಾಗಿ ರಾಷ್ಟ್ರೀಯ ಪಕ್ಷಗಳು ಬಹಳ ವೇಗವಾಗಿ ಸಾಗುತ್ತಿವೆ. ಸಿಎಂ ಈಗ ನವಕರ್ನಾಟಕ ನಿರ್ಮಾಣ ಮಾಡಲು ಹೊರಟಿದ್ದಾರೆ. ಆದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ನವಕರ್ನಾಟಕ ನಿರ್ಮಾಣವಾಗಲಿಲ್ವಾ? ಸಿಎಂ ಏನು ಮಾಡುತ್ತಿದ್ರು ಎಂದು ಸಿಎಂ ಪ್ರವಾಸದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಹಾಲು, ಅನ್ನ, ನೀರು ಕೊಟ್ಟ ರಾಜ್ಯ ಸರ್ಕಾರ ಎಂದು ಜಾಹೀರಾತು ನೋಡಿದ್ದೇನೆ. ಆದರೆ ಈ ಯೋಜನೆಗಳು ನಮ್ಮ ಸರ್ಕಾರದಲ್ಲಿ ಜಾರಿಯಾಗಿದ್ದು, ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದಲ್ಲ. ಸರ್ಕಾರ ಮದ್ಯದ ಬೆಲೆಯನ್ನು ಹೆಚ್ಚು ಮಾಡಿ ಬಡವರಿಂದ ವಸೂಲಿ ಮಾಡುತ್ತಿದೆ. ಒಂದು ಮದ್ಯದ ಬಾಟಲ್ ತಯಾರಿಕೆಗೆ ತಗುಲುವ ವೆಚ್ಚಕ್ಕಿಂತ ಹೆಚ್ಚಿನ ಬೆಲೆ ನಿಗದಿ ಮಾಡಿ ನಿಮ್ಮಿಂದ ಪಡೆಯುತ್ತಿದೆ. ಆ ಹಣದಲ್ಲಿ ಅನ್ನ ನೀಡ್ತಿದ್ದಾರೆ. ಸರ್ಕಾರದ ಘೋಷಣೆಗಳು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದಿವೆ ಅನ್ನೋದನ್ನ ಹೇಳಬೇಕು ಎಂದರು.ಬಿಜೆಪಿಯ ನಾಯಕರು ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬರಲು ಹೊರಟಿದ್ದಾರೆ. ಬೆಂಕಿ ಹಚ್ಚೋಕೆ ಬಿಜೆಪಿ ಮುಂದಾಗಿದೆ. ಅಮಾಯಕರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ನಾಡಿನ ಜನರಿಗೆ ರಕ್ಷಣೆ ನೀಡಲು ವಿಫಲವಾಗಿದೆ. ಸಿಎಂಗೆ ಇದೆಲ್ಲಾ ಬೇಕಿಲ್ಲಾ. ಅವರಿಗೆ ಪ್ರವಾಸ ಮುಖ್ಯ ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾನು ಸಾಕಷ್ಟು ಬಡ ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಹಾಯ ಮಾಡಿದ್ದೇನೆ. ಅದು ನಮಗೆ ಇರುವ ಕಮಿಟ್‌ಮೆಂಟ್. ಆರೋಗ್ಯ ಸಚಿವರಂತೆ ನನಗೆ ನಾಟಕ ಮಾಡೋಕೆ ಬರಲ್ಲ. ಕೇವಲ ವಿಧೇಯಕ ಮಂಡನೆ ಮಾಡಿದ್ರೆ ಸಾಲದು. ನೂರಾರು ಕೋಟಿ ಖರ್ಚು ಮಾಡಿ ಸಿಎಂ ಯಾತ್ರೆ ಮಾಡ್ತಿದಾರೆ. ಅದೇ ಹಣವನ್ನು ಬಡವರ ಏಳಿಗೆಗೆ ಬಳಸಬಹುದಿತ್ತು. ಕೋಟ್ಯಂತರ ರೂ. ತೆರಿಗೆ ಹಣವನ್ನು ಜಾಹೀರಾತಿಗೆ ಬಳಸ್ತಿದ್ದಾರೆ ಎಂದು ಆರೋಪಿಸಿದರು.ಹಲವಾರು ಸಮಾಜದವರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದೇನೆ. ಪ್ರಾಮಾಣಿಕವಾಗಿ ಜನರ ಏಳಿಗೆಗೆ ದುಡಿದಿದ್ದೇನೆ. ದಲಿತರ ಏಳಿಗೆಗೆ ಪ್ರತ್ಯೇಕ ಬಜೆಟ್ ಮಾಡಬೇಕೆಂದು ಅನ್ನದಾನಿಯವರು ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಪ್ರತ್ಯೇಕ ಕೃಷಿ ಬಜೆಟ್ ಮಾಡಿದ್ರು, ಅದು ಕೇವಲ ಪುಸ್ತಕದಲ್ಲಿ ಮಾತ್ರ ಉಳಿಯಿತು. ಮೀಸಲಾತಿ ಒಂದರಿಂದಲೇ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ. ಮೀಸಲಾತಿ ಕಾರ್ಯಕ್ರಮಗಳು ಅರ್ಹರಿಗೆ ತಲುಪುತ್ತಿಲ್ಲ. ಮೀಸಲಾತಿಗೆ ಮೀರಿ ನಿಮ್ಮ ಅಭಿವೃದ್ಧಿ ಆಗಬೇಕಿದೆ ಎಂದು ಎಚ್ ಡಿಕೆ ಹೇಳಿದರು.
Comments