ನಾಳಿನ ಜೆಡಿಎಸ್ ಬೃಹತ್ ದಲಿತ ಸಮಾವೇಶಕೆ ಹರಿದು ಬರಲಿದೆ ಜನ ಸಾಗರ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಬಲದ ಮೇಲೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಉದ್ದೇಶ ಹೊಂದಿರುವ ಜೆಡಿಎಸ್ ಸಮುದಾಯ ಆಧಾರಿತ ಸಭೆಗಳನ್ನು ನಡೆಸುವ ಮೂಲಕ ಜನರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ನಗರದ ಅರಮನೆ ಮೈದಾನದಲ್ಲಿ ದಲಿತರ ನಡಿಗೆ ಕುಮಾರಣ್ಣನ ಕಡೆಗೆ ಎಂಬ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೃಹತ್ ಸಮಾವೇಶ ಆಯೋಜಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ದಲಿತ ಸಮುದಾಯದ ನಾಯಕರು, ಮುಖಂಡರು, ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ಸಮಾವೇಶದ ಸಿದ್ಧತೆ ಭರದಿಂದ ಸಾಗಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‍ನ ಎಸ್‍ಸಿ-ಎಸ್‍ಟಿ ಘಟಕ ಸಮಾವೇಶವನ್ನು ಹಮ್ಮಿಕೊಂಡಿದೆ.ಜೆಡಿಎಸ್‍ನ ಎಸ್‍ಸಿ-ಎಸ್‍ಟಿ ವಿಭಾಗದ ಅಧ್ಯಕ್ಷ ಡಾ.ಕೆ.ಅನ್ನದಾನಿ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಇದರ ಬೆನ್ನಲ್ಲೆ ತುಮಕೂರಿನಲ್ಲಿ ಅಲ್ಪ ಸಂಖ್ಯಾತರ ಬೃಹತ್ ಸಮಾವೇಶವನ್ನು ಜೆಡಿಎಸ್ ಯಶಸ್ವಿಯಾಗಿ ನಡೆಸಿತು. ಆ ಸಮಾವೇಶಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ದೇವೇಗೌಡರು ಪ್ರಧಾನಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ನೀಡಿದ್ದ ಕೊಡುಗೆಯನ್ನು ಮುಕ್ತ ಕಂಠದಿಂದ ಪ್ರಶಂಸಿದ್ದರು.ಉತ್ತರ ಕರ್ನಾಟಕದಲ್ಲಿ ಬೃಹತ್ ರೈತ ಸಮಾವೇಶವನ್ನು ನಡೆಸಲು ಈಗಾಗಲೇ ಉದ್ದೇಶಿಸಲಾಗಿದೆ. ಚುನಾವಣೆ ಸಿದ್ಧತೆಯನ್ನು ಆರಂಭಿಸಿರುವ ಜೆಡಿಎಸ್ ನಿರಂತರವಾಗಿ ಸಮುದಾಯ ಆಧಾರಿತ ಸಮಾವೇಶಗಳನ್ನು ನಡೆಸುವ ಮೂಲಕ ಆಯಾ ಸಮುದಾಯದ ಓಲೈಕೆ ಮಾಡುವ ಪ್ರಯತ್ನವನ್ನು ಮಾಡುತ್ತಿದೆ.
ನಾಳೆ ನಡೆಯುವ ದಲಿತರ ಸಮಾವೇಶದಲ್ಲಿ ದಲಿತರ ಅಭಿವೃದ್ಧಿ, ಕಲ್ಯಾಣಕ್ಕೆ ಅಗತ್ಯವಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಜತೆಗೆ ಜನತಾದಳ ಅಧಿಕಾರದಲ್ಲಿದ್ದಾಗ ಅ ವರ್ಗಕ್ಕೆ ನೀಡಿದ ಕೊಡುಗೆಗಳ ಪ್ರಸ್ತಾಪ ಕೂಡ ಮಾಡಲಾಗುತ್ತದೆ.ಪ್ರತ್ಯೇಕ ದಲಿತ ಬಜೆಟ್ ಮಂಡಿಸಬೇಕೆಂಬ ಬೇಡಿಕೆಯನ್ನು ಈ ಸಮಾವೇಶದಲ್ಲಿ ಮಂಡಿಸುವ ಸಾಧ್ಯತೆಗಳಿವೆ. ಇಂದು ಮಧ್ಯಾಹ್ನ ಎಚ್.ಡಿ.ಕುಮಾರಸ್ವಾಮಿ ಅರಮನೆ ಮೈದಾನದಲ್ಲಿ ನಡೆಯುವ ದಲಿತ ಸಮಾವೇಶವನ್ನು ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು.
Comments