ಸಿ ಪಿ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ನಾನು ಮಾಧ್ಯಮದ ಮುಂದೆ ಕಮಿಟ್ ಆಗಿದ್ದೇನೆ. ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡುತ್ತೇವೆ. ಕಾರ್ಯಕರ್ತರ ಒತ್ತಡ ಇರೋದು ನಿಜ. ಆದರೂ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ಸಮಾವೇಶದ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ನಾಲ್ವರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿಯನ್ನು ನೋಡಿದ್ದೇನೆ. ಆದರೆ ಅದು ಸತ್ಯಕ್ಕೆ ದೂರವಾದದ್ದು. ಏನೇ ಒತ್ತಡ ಬಂದರೂ ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡುತ್ತೇವೆ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಸ್ಪರ್ಧೆ ವಿಚಾರವನ್ನು ತಳ್ಳಿ ಹಾಕಿದರು.
ಇಂಧನ ಸಚಿವ ಡಿ.ಕೆ ಶಿವಕುಮಾರ್ ಜೊತೆ ಯಾವುದೇ ಒಪ್ಪಂದ ಆಗಿಲ್ಲ, ನಾವು ಅಭ್ಯರ್ಥಿ ಹೆಸರು ಘೋಷಣೆ ಮಾಡಿದ ಬಳಿಕ ಇದು ಸ್ಪಷ್ಟವಾಗುತ್ತದೆ, ಆದರೆ ಸಿ ಪಿ ಯೋಗೇಶ್ವರ್ ಅವರಿಗೆ ಈ ರೀತಿ ಹೇಳಿಕೆ ನೀಡಿಯೇ ರಾಜಕಾರಣ ಮಾಡೋದು ಅನಿವಾರ್ಯವಾಗಿದೆ ಎಂದು ಸಿ ಪಿ ಯೋಗೇಶ್ವರ್ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಸಮಾಜದಲ್ಲಿ ಯಾವುದೇ ರೀತಿಯ ಅಶಾಂತಿಯ ಪರಿಸ್ಥಿತಿ ಆಗದಂತೆ ನೋಡಿಕೊಳ್ಳುವುದು ರಾಜಕೀಯ ಮುಖಂಡರ ಕರ್ತವ್ಯ, ಆದರೆ ಧಾರ್ಮಿಕವಾಗಿ ಸಮಾಜ ಒಡೆಯುವ ಕೆಲಸ ಆಗುತ್ತಿದೆ.ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಉತ್ತರ ಕನ್ನಡದ ಹಲವು ಪ್ರದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದ ಚಿತಾವಣೆಗೆ ಕರಾವಳಿ ಜನ ಬಲಿಯಾಗಬಾರದು. ಶಾಲಾ ಮಕ್ಕಳನ್ನೇ ಬಿಜೆಪಿ ಮೆರವಣಿಗೆಗೆ ಕರೆತರುತ್ತಿದೆ. ಕುಮಾಟಾದಲ್ಲಿ ಶಾಲಾ ಮಕ್ಕಳನ್ನು ಮೆರವಣಿಗೆಗೆ ಕರೆತಂದಿದ್ದಾರೆ ಎಂದು ಬಿಜೆಪಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.
ಯಾವ ಕಾರಣಕ್ಕೆ ಹೊನ್ನಾವರದಲ್ಲಿ ಯುವಕ ಸತ್ತನೋ ಗೊತ್ತಿಲ್ಲ. ಆದರೆ ಸಂಸದರೊಬ್ಬರು ಅಲ್ಲಿ ಹೋಗಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ವಾಹನಕ್ಕೇ ಬೆಂಕಿ ಹಚ್ಚಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ ಎಂದು ಕಾಂಗ್ರೆಸ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Comments