ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಅಭ್ಯರ್ಥಿ ಫಿಕ್ಸ್

08 Dec 2017 4:02 PM |
5936 Report

ಜೆಡಿಎಸ್ ರಾಜ್ಯ ಮಟ್ಟದ ಅಲ್ಪಸಂಖ್ಯಾತರ ಬೃಹತ್ ಸಮಾವೇಶ’ವನ್ನು ತುಮಕೂರಿನಲ್ಲಿ ಭಾನುವಾರ (ಡಿ.10) ಪಕ್ಷ ಹಮ್ಮಿಕೊಂಡಿದ್ದು, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಪಕ್ಷದ ವರಿಷ್ಠರಾದ ಎಚ್.ಡಿ ದೇವೇಗೌಡ ಅವರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು,ಮಧುಗಿರಿ ಕ್ಷೇತ್ರಕ್ಕೆ ರಂಗಾಯಣ ರಘು ಆಕಾಂಕ್ಷಿ ವಿಚಾರದ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಾಗಿದೆ. ಮಧುಗಿರಿ ಕ್ಷೇತ್ರಕ್ಕೆ ವೀರಭದ್ರಯ್ಯರವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಡಿಸೆಂಬರ್ 15 ರಂದು ಅಧಿಕೃತ ಪ್ರಕಟನೆ ಹೊರಬೀಳಲಿದೆ ಎಂದರು.ರಾಜ್ಯದಲ್ಲಿ ಬದಲಾವಣೆಯ ಪ್ರಕ್ರಿಯೆ ಆರಂಭವಾಗಿದೆ. ಪಕ್ಷದ ವತಿಯಿಂದ ಸಮಾವೇಶಗಳಿಗೆ ಚಾಲನೆ ನೀಡುತ್ತಿದ್ದೇವೆ. ಮೊದಲ ಸಮಾವೇಶ ಅಲ್ಪಸಂಖ್ಯಾತರ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆಯಲಿದೆ. ಕನಿಷ್ಠ 80 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದಲ್ಲಿ ಜಮ್ಮುಕಾಶ್ಮೀರದ ನಾಯಕ ಫಾರೂಕ್ ಅಬ್ದುಲ್ಲಾ ಭಾಗವಹಿಸಲಿದ್ದಾರೆ ಎಂದರು.

ಡಿ.13ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎಸ್ಸಿ,ಎಸ್ಟಿ ಬೃಹತ್ ಸಮಾವೇಶ ನಡೆಸಲಾಗುತ್ತಿದ್ದು, 2 ಲಕ್ಷ ಜನರು ಸೇರಲಿದ್ದಾರೆ. ಜನವರಿ 2ನೇ ವಾರ ವಿಜಯಪುರ ಜಿಲ್ಲೆಯಲ್ಲಿ ರೈತರ ಸಮಾವೇಶ,  ಜನವರಿ 9ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸೌಹಾರ್ದ ಸಮಾವೇಶ ನಡೆಸಲಾಗುತ್ತಿದೆ. ಜನತಾದಳ ನಡಿಗೆ ಸೌಹಾರ್ದತೆಯ ಕಡೆಗೆ ಎಂಬ ಅಭಿಯಾನದ ಮೂಲಕ ಸೌಹಾರ್ದತೆ ಸಾರುವ ಕೆಲಸ ಮಾಡಲಿದೆ ಎಂದರು.

ಜೆಡಿಎಸ್ ನಡೆಸುವ ಯಾವ ಸಮಾವೇಶದಲ್ಲೂ ಬೇರೆ ಪಕ್ಷದವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದಿಲ್ಲ.ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಏನು ಮಾಡಲಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ. ಇದರ ಜೊತೆಗೆ ಈಗಿನ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.ಝಮೀರ್ ಅಹ್ಮದ್ ಪರ್ಯಾಯವಾಗಿ ನಾವು ಸಮಾವೇಶ ಮಾಡುತ್ತಿಲ್ಲ. ಅವರು ಯಾರು, ಅವರ ವಿರುದ್ದ ಯಾಕೆ ಸಮಾವೇಶ ಮಾಡಲಿ ಎಂದು ಎಚ್ ಡಿಕೆ ಪ್ರಶ್ನಿಸಿದರು.ರಾಮನಗರ ಕ್ಷೇತ್ರ ನನ್ನ ಕರ್ಮಭೂಮಿಯಾಗಿದ್ದು, ರಾಮನಗರದಿಂದ ಸ್ಪರ್ಧಿಸುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ. ಆದರೆ ಈ ಬಗ್ಗೆ ಸಮಯ ಬಂದಾಗ ಆಲೋಚಿಸುತ್ತೇನೆ. ಜೆಡಿಎಸ್ ಗೆ ಬನ್ನಿ ಎಂದು ಯಾರನ್ನೂ ಕರೆಯುವುದಿಲ್ಲ. ಬರುವವರನ್ನು ಬೇಡ ಎನ್ನುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

 

 

 

Edited By

Shruthi G

Reported By

hdk fans

Comments