ಜೆಡಿಎಸ್ ಸೇರಲು ಕಾಂಗ್ರೆಸ್ ಮುಖಂಡನಿಗೆ ಆಹ್ವಾನ ನೀಡಿದ ದೇವೇಗೌಡ್ರು
ಕಳೆದ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಪೈಪೋಟಿ ನಡೆಸಿದ್ದ ಗಣಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹೊತ್ತೂರ್ ಮನೆಗೆ ಮಾಜಿ ಪ್ರಧಾನಿ ದೇವೇಗೌಡರು ಇಂದು ದಿಢೀರ್ ಭೇಟಿ ನೀಡಿದರು. ಈ ವೇಳೆ ರಾಜಕೀಯ ಚರ್ಚೆ ನಡೆಸಿ ಹೊತ್ತೂರ್ ಮನೆಯಲ್ಲಿ ಉಪಹಾರ ಸೇವನೆ ಮಾಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿಯಲ್ಲಿಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು, ಮುಂಜಾನೆ ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಇಕ್ಬಾಲ್ ಹೊತ್ತೂರ್ ಮನೆಗೆ ದಿಢೀರ್ ಭೇಟಿ ನೀಡಿ ರಾಜಕೀಯ ಚರ್ಚೆ ನಡೆಸಿದರು. ಇದೇ ವೇಳೆ ಹೊತ್ತೂರ್ ಅವರನ್ನ ಪಕ್ಷಕ್ಕೆ ಆಹ್ವಾನ ಮಾಡಿದರು. ದೇವೇಗೌಡರ ಆಹ್ವಾನವನ್ನು ಸ್ವೀಕರಿಸಿರುವ ಹೊತ್ತೂರ್, ಡಿಸೆಂಬರ್ ಅಂತ್ಯದ ವೇಳೆಗೆ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಇಕ್ಬಾಲ್ ಹೊತ್ತೂರ್ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿದ್ದ ವೇಳೆ ಕಾಂಗ್ರೆಸ್ ಪಕ್ಷ ಅವರ ಸಹೋದರ ಅಬ್ದುಲ್ ವಹಾಬ್ ರನ್ನು ಹೊಸಪೇಟೆಯಿಂದ ಕಣಕ್ಕೆ ಇಳಿಸಿ ಪರಾಭವಗೊಂಡಿದ್ದರು. ಹೀಗಾಗಿ ಈ ಬಾರಿ ಇಕ್ಬಾಲ್ ಹೊತ್ತೂರ್ ಅವರನ್ನು ಬಳ್ಳಾರಿ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಜೆಡಿಎಸ್ ಮುಂದಾಗಿದೆ. ಅಲ್ಲದೇ ಬಳ್ಳಾರಿ ಜಿಲ್ಲೆಯ ಎಲ್ಲಾ 9 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ದೇವೇಗೌಡರು ರಣತಂತ್ರ ರೂಪಿಸಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.
Comments