ಮಹಿಳಾ ಸಮಾಜ ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ವೈಖರಿ ಕುರಿತು ಜಟಾಪಟಿ, ಇಂದು ಡಿ. ೩ ಚುನಾವಣೆ

03 Dec 2017 8:58 AM |
277 Report

ದೊಡ್ಡಬಳ್ಳಾಪುರದ ಮಹಿಳಾ ಸಮಾಜದಲ್ಲಿ ಶನಿವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಡಳಿತ ವೈಖರಿ ಕುರಿತು ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಹಿಳಾ ಸಮಾಜದ ಆವರಣದಲ್ಲಿ ಅಧ್ಯಕ್ಷೆ ಎಲ್.ಸಿ. ದೇವಕಿ ನೇತೃತ್ವದಲ್ಲಿ ಮಹಾಸಭೆ ಆಯೋಜಿಸಲಾಗಿತ್ತು. ಸಂಸ್ಥೆಯ ೨೦೧೨-೨೦೧೭ರ ಐದು ವರ್ಷಗಳ ಕಾರ್ಯಕ್ರಮಗಳ ವರದಿಯನ್ನು ನಿರ್ದೇಶಕಿ ಕವಿತಾ ಮತ್ತು ಖಜಾಂಚಿ ಯಶೋದಾ ಮಂಡಿಸಿದರು. ಸಮಾಜದ ಐದು ವರ್ಷದ ಆಡಳಿತ ವೈಖರಿ ಬಗ್ಗೆ ಕೆ.ಎಸ್. ಪ್ರಭ, ಎಲ್.ಎನ್. ವಸುಂಧರಾದೇವಿ, ಎನ್.ಸಿ. ಲಕ್ಷ್ಮಿ, ಎಚ್.ಎಸ್. ರೇವತಿ, ಮಂಜುಳಾ ಆಂಜನೇಯ ಅಸಮಧಾನ ವ್ಯಕ್ತಪಡಿಸಿದರು. ಮಹಿಳಾ ಸಮಾಜ ಬರೀ ರಾಷ್ಟ್ರೀಯ ಹಬ್ಬ ಆಚರಿಸಲು ಇರುವ ಸಂಸ್ಥೆಯಲ್ಲ, ಅವುಗಳ ಜೊತೆಗೆ ಮಹಿಳೆಯರ ಸಮಕಾಲೀನ ಸವಾಲುಗಳಿಗೆ ಉತ್ತರ ಕಂಡುಕೊಳ್ಳವ ಕಾರ್ಯಕ್ರಮ ಆಯೋಜಿಸಬೇಕಿತ್ತು. ದೂರದೃಷ್ಠಿ ಇಲ್ಲದೆ ಕೇವಲ ನೆಪಮಾತ್ರದ ಕಾರ್ಯಕ್ರಮ ಮಾಡಿದ್ದೀರಿ, ಸದಸ್ಯರಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಡುವ ಸೌಜನ್ಯ, ಹೊಣೆಗಾರಿಕೆ ನಿಭಾಯಿಸಿಲ್ಲ ಎಂದು ಆರೋಪಿಸಿದರು.

ಕಾರ್ಯದರ್ಶಿ ವತ್ಸಲಾ ಪ್ರತಿಕ್ರಿಯಿಸಿ ಹಲವು ಬಾರಿ ಮಾಹಿತಿ ನೀಡಿದ್ದರೂ ಉತ್ತಮ ಸ್ಪಂಧನೆ ದೊರೆತಿಲ್ಲ. ಅಲ್ಲದೆ ಅಧಿಕಾರಕ್ಕೆ ಬಂದಾಗ ಇದ್ದ ಹಣದಲ್ಲಿ ಕಟ್ಟಡ ನವೀಕರಣವೆ ಸವಾಲಾಗಿತ್ತು ಎಂದು ಹೇಳಿದರು.  ಮಹಿಳೆಯರು ಭಾಗವಹಿಸಬೇಕಾದ ಕಾರ್ಯಕ್ರಮ ರೂಪಿಸಿದ್ದರೆ ಸಹಜವಾಗಿಯೇ ಸದಸ್ಯರು ಬರುತ್ತಿದ್ದರು,  ಹಣದ ಕೊರತೆಯಿಂದ ಕಾರ್ಯಕ್ರಮ ರೂಪಿಸಿಲ್ಲ ಎಂಬುದು ಸರಿಯಲ್ಲ,  ಹಿಂದಿನ ಸಮಿತಿಗಳು ಕಾರ್ಯ ನಿರ್ವಹಿಸುವಾಗ ಹಣವೇನೂ ಇರಲಿಲ್ಲ ಎಂಬ ಉತ್ತರ ಸದಸ್ಯರಿಂದ ವ್ಯಕ್ತವಾಯಿತು.  ಆರೋಪ-ಪ್ರತ್ಯಾರೋಪದ ನಡುವೆ ಲೆಕ್ಕಪತ್ರ,  ಬಜೆಟ್ ಮಂಡಿಸಲಾಯಿತು.  ಇಂದು [ಡಿ. ೩] ಚುನಾವಣೆ ನಡೆಯಲಿದೆ, ೯ ಮಂದಿ ನಿರ್ದೇಶಕ ಸ್ಥಾನಕ್ಕೆ ೨೩ ಮಂದಿ ಕಣದಲ್ಲಿದ್ದಾರೆ,  ೪೦೦ಕ್ಕೂ ಹೆಚ್ಚು ಸದಸ್ಯರು ಮಾತದಾನದ ಹಕ್ಕು ಹೊಂದಿದ್ದಾರೆ.

Edited By

Ramesh

Reported By

Ramesh

Comments