ಹರಪನಹಳ್ಳಿ ಯುವತಿ ಆತ್ಮಹತ್ಯೆ ಬಗ್ಗೆ ಎಚ್ ಡಿಕೆ ಟ್ವೀಟ್

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಸರ್ಕಾರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸ್ವಚ್ಛ ಭಾರತ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀವ್ರ ಆಸಕ್ತಿ ವಹಿಸಿದ್ದರೂ ಯೋಜನೆ ಜಾರಿಯಲ್ಲಿ ಲೋಪಗಳಾಗುತ್ತಿವೆ ಎಂಬುದಕ್ಕೆ ಯುವತಿ ಅನ್ನಪೂರ್ಣ ಆತ್ಮಹತ್ಯೆ ಪ್ರಕರಣ ಸಾಕ್ಷಿಯಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಆ ಕುಟುಂಬದ ಬಡತನ, ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ದಬ್ಬಾಳಿಕೆ ನಡೆಸಿದ ಮನುಷ್ಯತ್ವವಿಲ್ಲದ ವ್ಯಕ್ತಿಗಳನ್ನು ನಾಗರಿಕ ಸಮಾಜ ಎಂದೂ ಕ್ಷಮಿಸದು ಎಂದು ಹೇಳಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಒಗಳನ್ನು ಸರ್ಕಾರ ತಕ್ಷಣವೇ ಬಂಧಿಸಬೇಕು. ಅಲ್ಲದೆ, ಸಾವಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದ ಎಲ್ಲರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Comments