ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರಿಗೆ ಉಪ ಮುಖ್ಯಮಂತ್ರಿ ಪಟ್ಟ: ಎಚ್ ಡಿಕೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಬ್ಬ ದಲಿತ ಹಾಗೂ ಒಬ್ಬ ಮುಸ್ಲಿಮ್ ಸಮುದಾಯದ ನಾಯಕನನ್ನು ಉಪಮುಖ್ಯಮಂತ್ರಿಯಾಗಿ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ರಾಜ್ಯದ ವಿವಿಧ ದಲಿತ ಸಂಘಟನೆಯ ಮುಖಂಡರೊಂದಿಗೆ ಮುಕ್ತ ಸಂವಾದ ನಡೆಸಿ ಮಾತನಾಡಿದ ಅವರು, ನಾನು ಸುಮ್ಮನೆ ಭರವಸೆ ನೀಡುವವನಲ್ಲ. ನಾನು ಏನು ಹೇಳುತ್ತೇನೆ ಆ ರೀತಿ ನಡೆಯುತ್ತೇನೆ. ಹೀಗಾಗಿ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯದ ಅಭ್ಯರ್ಥಿಯನ್ನು ಉಪ ಮುಖ್ಯಮಂತ್ರಿಯಾಗಿ ಮಾಡುತ್ತೇನೆಂದು ಭರವಸೆ ನೀಡಿದರು.ರಾಜ್ಯದಲ್ಲಿ ಭಡ್ತಿಗೆ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. ಸಾಮಾಜಿಕ ನ್ಯಾಯದ ಅನುಸಾರವಾಗಿ ದಲಿತ ಸಮುದಾಯಕ್ಕೆ ಭಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ಜೆಡಿಎಸ್ ಸಂಪೂರ್ಣವಾಗಿ ಬೆಂಬಲಿಸಲಿದೆ. ರಾಜ್ಯ ಸರಕಾರ ಭಡ್ತಿ ಮೀಸಲಾತಿ ಜಾರಿಯಾಗುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಬೇಕಿದೆ ಎಂದರು.
ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಗೆ ಅಧಿಕಾರ ಕೊಡಿ. ದಲಿತ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಎಲ್ಲ ಜಾತಿಯ ಬಡವರನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ. ಮುಂದಿನ ಹತ್ತು ಇಲ್ಲವೆ ಹದಿನೈದು ವರ್ಷದಲ್ಲಿ ದಲಿತ ಸಮುದಾಯದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತೇನೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ನಾನು ಅಧಿಕಾರಕ್ಕೆ ಬಂದರೆ ವಿಧಾನಸೌಧದ ಗೇಟ್‌ಗಳನ್ನು ಕಿತ್ತು ಹಾಕಿ, ರಾಜ್ಯದ ಎಲ್ಲ ಪ್ರಜೆಗಳಿಗೂ ಮುಕ್ತ ಅವಕಾಶ ಮಾಡಿಕೊಡುತ್ತೇನೆ. ಎಲ್ಲ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ ನಂತರವೇ ಯೋಜನೆಗಳನ್ನು ಹಮ್ಮಿಕೊಳ್ಳುತ್ತೇನೆ. ಜನತೆಯ ಹಿತವೇ ಸರಕಾರದ ಹಿತವೆನ್ನುವ ರೀತಿಯಲ್ಲಿ ಮಾದರಿ ಅಧಿಕಾರ ನೀಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
Comments