ನಮ್ಮ ಸರಕಾರ ನುಡಿದಂತೆ ನಡೆದಿದೆ : ಡಿ.ಕೆ.ಶಿವಕುಮಾರ್
ಕಳೆದ ನಾಲ್ಕು ವರ್ಷಗಳ ಹಿಂದೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಾಗ 14 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತಿತ್ತು. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ 20 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ವಿದ್ಯುತ್ ಇಲಾಖೆ ಅತೀ ವೇಗದಲ್ಲಿ ಪ್ರಗತಿ ಸಾಧಿಸಿದ್ದು, ಉತ್ತಮ ಸಾಧನೆ ಮಾಡಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಮ್ಮ ಸರಕಾರ ನುಡಿದಂತೆ ನಡೆದಿದೆ. ರೈತರ ಹಿತಾಸಕ್ತಿ ಕಾಪಾಡಲು ನಾವು ಸದಾ ಸಿದ್ಧರಿದ್ದೇವೆ. ರೈತರ ಅನಧೀಕೃತವಾದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಪಂಪ್ಸೆಟ್ಗಳನ್ನು ಕೆಲವು ನಿಯಮಗಳ ಪ್ರಕಾರ ಸಕ್ರಮಗೊಳಿಸಲಾಗಿದೆ. ರಾಜ್ಯದಲ್ಲಿರುವ ಇಂತಹ ಶೇ.80ಕ್ಕೂ ಹೆಚ್ಚು ರೈತರಿಗೆ ಅನುಕೂಲ ಮಾಡಲಾಗಿದ್ದು, ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಲಾಗುವುದು ಎಂದರು. ಕೇಂದ್ರ ಸರಕಾರದ ತಾರತಮ್ಯ ನೀತಿ ಹಾಗೂ ಅಸಮರ್ಪಕ ಕಲ್ಲಿದ್ದಲು ಪೂರೈಕೆಯಿಂದ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಸರಿಯಾದ ಸಮಯಕ್ಕೆ ಕೇಂದ್ರ ಸರಕಾರ ಕಲ್ಲಿದ್ದಲು ಪೂರೈಸದಿದ್ದಲ್ಲಿ ಖಾಸಗಿಯವರಿಂದ ಕಲ್ಲಿದ್ದಲು ಖರೀದಿಸಲು ಸರಕಾರ ಪೂರ್ವ ತಯಾರಿ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.
ರೈತರ ಅನುಕೂಲತೆ ದೃಷ್ಟಿಯಿಂದ ರೈತರ ಜಮೀನುಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಿ ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ 300 ರೈತರಿಗೆ ಸೋಲಾರ್ ಪಾರ್ಕ್ ನಿರ್ಮಿಸಿ ಯಶಸ್ವಿಯಾಗಿದ್ದೇವೆ. ಈಗ ರಾಜ್ಯದ 120 ತಾಲೂಕುಗಳನ್ನು ಆಯ್ಕೆಮಾಡಿ, ಪ್ರತಿ ತಾಲೂಕಿನಿಂದ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಹೀಗೆ ಪಡೆದ ವಿದ್ಯುತ್ನ್ನು ಸ್ಥಳೀಯ ಗ್ರೀಡ್ಗಳ ಮೂಲಕ ರೈತರಿಗೆ ವಿತರಿಸಲಾಗುವುದು ಹಾಗೂ ಪಾವಗಡ ತಾಲೂಕಿನಲ್ಲಿ 13 ಸಾವಿರ ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಸೋಲಾರ್ ಪಾರ್ಕ್ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
Comments