ಮುಂಬರುವ ದಿನಗಳಲ್ಲಿ ವಿದ್ಯುತ್ ಅಭಾವ ಎದುರಾಗಲಿದೆ : ಡಿ ಕೆ ಶಿವಕುಮಾರ್

ಕೇಂದ್ರ ಸರ್ಕಾರ ದಿನದ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವಷ್ಟು ಕಲ್ಲಿದ್ದಲನ್ನು ಮಾತ್ರ ಪೂರೈಕೆ ಮಾಡುತ್ತಿದೆ. ಒಂದು ದಿನ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಾಸವಾದರೂ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಇದರಿಂದಾಗಿ ವಿದ್ಯುತ್ ಅಭಾವ ಎದುರಾಗಲಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ಪೂರೈಸುವ ಬದಲು ಹೆಚ್ಚುವರಿಯಾಗಿ ಕಲ್ಲಿದ್ದಲು ನೀಡಿ ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ಕೇಂದ್ರ ಸರ್ಕಾರ ರೈಲಿನಲ್ಲಿ ಹೊರತುಪಡಿಸಿ ಬೇರೆ ಯಾವ ಸಾರಿಗೆ ಮಾರ್ಗದಿಂದಲೂ ಕಲ್ಲಿದ್ದಲು ಕಳಿಹಿಸುವುದಿಲ್ಲ ಎಂಬ ಹಠಕ್ಕೆ ಬಿದ್ದಿದೆ. ಕಲ್ಲಿದ್ದಲ ಸಂಬಂಧ ಕೆಲವು ಕಾನೂನು ವ್ಯಾಜ್ಯಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಶೋಕಾಸ್‍ನೋಟಿಸ್ ಕೂಡ ಬಂದಿದೆ. ನ್ಯಾಯಾಲಯ ಸರದಿಯ ಮೇಲೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಿದೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ನಮಗೆ ಪ್ರಕರಣ ತುರ್ತಾಗಿ ಇತ್ಯರ್ಥಗೊಳ್ಳಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಹೆಚ್ಚುವರಿ ಕಲ್ಲಿದ್ದಲು ಪೂರೈಕೆಯಾಗಬೇಕು. ಹೀಗಾಗಿ ಆದ್ಯತೆ ಮೇರೆಗೆ ನಮ್ಮ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ವಕೀಲರ ಮೂಲಕ ಕೋರ್ಟ್‍ಗೆ ಮನವಿ ಮಾಡುವ ಸಂಬಂಧವೂ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು. ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಆ, ರಾಜ್ಯದ ಅಡ್ವೋಕೇಟ್ ಜನರಲ್(ಎಜಿ) ಮತ್ತಿತರರು ಭಾಗವಹಿಸಿದ್ದರು. ಈಗಾಗಲೇ ಮಳೆಗಾಲ ಮುಗಿಯುತ್ತಿದ್ದು, ಬಿಸಿಲಿನ ತಾಪ ಹೆಚ್ಚಾಗಿದೆ. ವಿದ್ಯುತ್ ಬೇಡಿಕೆ ತೀವ್ರಗೊಳ್ಳುತ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟವು ಕಡಿಮೆಯಾಗುತ್ತಿರುವುದರಿಂದ ನಮಗೆ ಉಷ್ಣವಿದ್ಯುತ್ ಉತ್ಪಾದನೆಯೇ ಪ್ರಮುಖ ಆಧಾರ. ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾದರೆ ಉತ್ಪಾದನೆ ಕಡಿತಗೊಳ್ಳುತ್ತದೆ. ಅನಿವಾರ್ಯವಾಗಿ ಲೋಡ್‍ಶೆಡ್ಡಿಂಗ್ ಜಾರಿಗೋಳಿಸಬೇಕಾಗುತ್ತದೆ.
Comments