ಜೆಡಿಎಸ್ ಸೇರ್ಪಡೆಗೊಂಡ ಖ್ಯಾತ ಉದ್ಯಮಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟ್ಟ
ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ಫಾರೂಕ್ ಹಾಗು ಬಸವರಾಜ ಹೊರಟ್ಟಿ ಸಹಿತ ಪಕ್ಷದ ಸಂಸದರು, ಶಾಸಕರು ಮತ್ತಿತರ ಮುಖಂಡರ ಸಮ್ಮುಖದಲ್ಲಿ ಅಬ್ದುಲ್ ರವೂಫ್ ಅವರು ಪಕ್ಷಕ್ಕೆ ಸೇರಿದ್ದಾರೆ. ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂದು ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಹೇಳಿದ್ದಾರೆ.
ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಅಬ್ದುಲ್ ರವೂಫ್ ಪುತ್ತಿಗೆಯವರು ಇದೀಗ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಕೊಂಡಿದ್ದಾರೆ. ಮಂಗಳೂರು, ಬೆಂಗಳೂರು ಹಾಗು ಮೂಡುಬಿದಿರೆಗಳಲ್ಲಿ ಕಾರ್ಯಾಚರಿಸುತ್ತಿರುವ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ವಿಶ್ವಾಸ್ ಬಾವಾ ಬಿಲ್ಡರ್ಸ್ ನ ಆಡಳಿತ ನಿರ್ದೇಶಕರಾಗಿರುವ ಅಬ್ದುಲ್ ರವೂಫ್ ಪುತ್ತಿಗೆಯವರು ಸಮಾಜ ಸೇವಾ ಸಂಸ್ಥೆ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ನ ಸ್ಥಾಪಕ ಅಧ್ಯಕ್ಷರು. ಈ ಸಂಸ್ಥೆ ಕಳೆದ ಸುಮಾರು ಒಂದೂವರೆ ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಾತಿ ಧರ್ಮ ಭೇದವಿಲ್ಲದೆ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಮರಳಿ ಬಾ ಶಾಲೆಗೆ, ಸ್ವ ಉದ್ಯೋಗ ತರಬೇತಿ, ಸಾಧಕರಿಗೆ ಪ್ರೋತ್ಸಾಹ, ಸೌಹಾರ್ದ ಕಾರ್ಯಕ್ರಮಗಳು, ಧಾರ್ಮಿಕ ಶಿಕ್ಷಕರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ವಿನೂತನ ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗು ಯೋಜನೆಗಳ ಮೂಲಕ 'ಟ್ಯಾಲೆಂಟ್' ಗಮನ ಸೆಳೆದಿದೆ. ಕಳೆದ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಈ ಸಂಸ್ಥೆ ಪಾತ್ರವಾಗಿದೆ.
Comments