ವಿಧಾನಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಅವಕಾಶವಿಲ್ಲ: ಎಚ್‌ಡಿಕೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು, ಕಾರ್ಯಕರ್ತರು ಇತರೆ ಪಕ್ಷಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಬಾರದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್, ಬಿಜೆಪಿ– ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಈಗಿನಿಂದಲೇ ಕನವರಿಸುತ್ತಿವೆ. ಹೀಗಾಗಿ ಬೇರೊಂದು ಪಕ್ಷದ ಮನೆಬಾಗಿಲಿಗೆ ಹೋಗದಂತೆ ಮಾಡಲು, ಎಲ್ಲರೂ ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ಕರೆ ನೀಡಿದರು.ಮುಂದಿನ ಚುನಾವಣೆ ಬಳಿಕ ಬಿಜೆಪಿ ಜೊತೆ ನಾನು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂಬ ಕಾಂಗ್ರೆಸ್ ಮುಖಂಡರ ಅಪಪ್ರಚಾರವನ್ನು ಯಾವ ಕಾರಣಕ್ಕೂ ನಂಬಬೇಡಿ’ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಯಾವುದೇ ಭಾಗಕ್ಕೆ ನಾನು ಹೋದಾಗಲೂ ಸ್ಥಳೀಯರು ಅಪಾರ ಪ್ರೀತಿ ತೋರಿಸುತ್ತಾರೆ. ನೂರಾರು ಮುಖಂಡರು, ಕಾರ್ಯಕರ್ತರು ನನ್ನ ಜೊತೆಗೆ ಸುತ್ತಾಡುತ್ತಾರೆ. ಆದರೆ, ನಾನು ಬೆಂಗಳೂರಿಗೆ ಹೋದ ಬಳಿಕ ಎಲ್ಲರೂ ಮನೆಯಲ್ಲಿ ಮಲಗುತ್ತಾರೆ. ಇದರಿಂದಲೇ ಪಕ್ಷ ಸಂಘಟನೆ ಚುರುಕಾಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕದ ಮತದಾರರು ಜೆಡಿಎಸ್‌ಗೆ ವೋಟ್ ಹಾಕಲು ಸಿದ್ಧರಿದ್ದಾರೆ. ಆದರೆ, ವೋಟ್ ಹಾಕಿಸಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ತಯಾರಾಗಿಲ್ಲ. ಈ ನಿಟ್ಟಿನಲ್ಲಿ ಬದಲಾವಣೆ ಅಗತ್ಯ’ ಎಂದು ಹೇಳಿದರು.
ಮುಂಬರುವ ಚುನಾವಣೆ ಪಕ್ಷದ ಪಾಲಿಗೆ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ 50 ಸ್ಥಾನಗಳನ್ನು ಗೆಲ್ಲುವ ಸವಾಲು ಸ್ವೀಕರಿಸಿದ್ದೇನೆ. ಇದನ್ನು ಸಾಕಾರಗೊಳಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಅವರು ಕರೆ ನೀಡಿದರು.ಪಕ್ಷದ ‘ಬಿ’ ಫಾರಂಗಾಗಿ ಮುಖಂಡರ ಮನೆ ಎದುರು ನಿಲ್ಲುವ ಅಗತ್ಯವಿಲ್ಲ. ‘ಬಿ’ ಫಾರಂ ಸಿಕ್ಕಿದಾಕ್ಷಣ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಜನರ ಜೊತೆ ಬೆರೆತು ಕೆಲಸ ಮಾಡಿ, ಪಕ್ಷಕ್ಕಾಗಿ ದುಡಿಯುವವರಿಗೆ ದ್ರೋಹ ಮಾಡುವುದಿಲ್ಲ’ ಎಂದರು.ರಾಜ್ಯದಲ್ಲಿ ಬಿಜೆಪಿ, ಆರ್‌ಎಸ್‌ಎಸ್, ಬಜರಂಗ ದಳದವರು ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮುಸ್ಲಿಮರು ಜೆಡಿಎಸ್ ಬೆಂಬಲಿಸಬೇಕು’ ಎಂದು ಅವರು ಮನವಿ ಮಾಡಿದರು.
Comments