ಸಿದ್ಧರಾಮಯ್ಯಗೆ ಖಡಕ್ ವಾರ್ನಿಂಗ್ ಕೊಟ್ಟ ಎಚ್ ಡಿಕೆ
ರಾಜ್ಯಾದ್ಯಂತ ಸಾರಿಗೆ ಇಲಾಖೆ ಚೆಕ್ ಪೋಸ್ಟುಗಳ ಮೂಲಕ ಸರ್ಕಾರ ರೌಡಿಗಳ ಮೂಲಕ ದರೋಡೆ ಮಾಡಿಸುತ್ತಿದ್ದು ಪ್ರತಿ ತಿಂಗಳು 200 ಕೋಟಿ ರೂ ಸಂಗ್ರಹಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ,ಇನ್ನು ಹದಿನೈದು ದಿನಗಳಲ್ಲಿ ಚೆಕ್ ಪೋಸ್ಟ್ ಗಳು ಬಂದ್ ಆಗದಿದ್ದರೆ ಪಕ್ಷದ ಕಾರ್ಯಕರ್ತರು ಈ ವಸೂಲಿ ಕೇಂದ್ರಗಳಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಗುಡುಗಿದ್ದಾರೆ.
ಪಕ್ಷದ ಕಛೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ಜಿ.ಎಸ್.ಟಿ.ಜಾರಿಗೆ ತಂದ ನಂತರ ದೇಶಾದ್ಯಂತ ಚೆಕ್ ಪೋಸ್ಟ್ ಗಳು ಬಂದ್ ಆಗುತ್ತಿವೆ.ಆದರೆ ಕರ್ನಾಟಕದಲ್ಲಿ ಬಂದ್ ಆಗಿಲ್ಲ.ಬದಲಿಗೆ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ತಲಾ ನಾಲ್ಕು ರೌಡಿಗಳನ್ನಿಷ್ಟು ವಾಹನ ಮಾಲೀಕರಿಂದ ವಸೂಲಿ ಮಾಡಿಸಲಾಗುತ್ತಿದೆ ಎಂದು ನೇರವಾಗಿ ಆರೋಪಿಸಿದರು.ಇದು 1000 ಕೋಟಿ ರೂಪಾಯಿಗಳ ಧಂದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರಮ ಪ್ರಾಮಾಣಿಕರಂತೆ ಹೇಳಿಕೊಳ್ಳುತ್ತಾರೆ,ಆದರೆ ಚೆಕ್ ಪೋಸ್ಟ್ ಗಳಲ್ಲಿ ಹೆಸರಿಗೆ ಒಬ್ಬ ಇನ್ಸ್ ಪೆಕ್ಟರ್ ಇದ್ದರೆ ನಾಲ್ಕು ಮಂದಿ ರೌಡಿಗಳು ನಿಂತು ವಸೂಲಿ ಮಾಡುತ್ತಾರೆ.ಒಂದೊಂದು ಚೆಕ್ ಪೋಸ್ಟ್ ನಲ್ಲೂ ದಿನವೊಂದಕ್ಕೆ ಮೂವತ್ತು ಲಕ್ಷ ರೂಪಾಯಿಗಳಷ್ಟು ಹಣ ವಸೂಲು ಮಾಡಲಾಗುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಈ ರಾಜ್ಯವನ್ನು ಮುಖ್ಯಮಂತ್ರಿಗಳು ರೌಡಿಗಳಿಂದ ನಡೆಸಲು ತೀರ್ಮಾನಿಸಿದಂತಿದೆ.ಚೆಕ್ ಪೋಸ್ಟ್ ಗಳಲ್ಲಿ ನಡೆಯುತ್ತಿರುವ ಈ ಧಂದೆಯನ್ನು ನೋಡಿಯೂ ಸಾರಿಗೆ ಸಚಿವರು,ಗೃಹ ಸಚಿವರು ಸುಮ್ಮನಿದ್ದಾರೆ ಎಂದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ನೇರ ಎಚ್ಚರಿಕೆ ನೀಡಿದರು.ಒಂದೊಂದು ಚೆಕ್ ಪೋಸ್ಟ್ ಗಳ ಮುಂದೆಯೂ ಕಿಲೋಮೀಟರುಗಳುದ್ದ ವಾಹನಗಳು ನಿಂತಿರುತ್ತವೆ.ಪ್ರತಿ ವಾಹನಗಳವರನ್ನು ಬೆದರಿಸಿ ರೌಡಿಗಳು ದರೋಡೆ ಮಾಡುತ್ತಾರೆ.ತನಿಖಾ ಸಂಸ್ಥೆಗಳು ಇದನ್ನೆಲ್ಲ ನೋಡುತ್ತಿವೆಯೋ?ಏನು ಮಾಡುತ್ತಿವೆ?ಎಂದು ಪ್ರಶ್ನಿಸಿದರು.ಕೆಲ ಚೆಕ್ ಪೋಸ್ಟ್ ಗಳನ್ನು ರದ್ದು ಮಾಡಲಾಗಿದೆ ಎಂದು ಸಾರಿಗೆ ಸಚಿವರು ಹೇಳುತ್ತಾರೆ.ಆದರೆ ಹೊರರಾಜ್ಯಗಳಿಗೆ ಹೋಗುವ ಹಾಗೂ ಹೊರರಾಜ್ಯಗಳಿಂದ ಬರುವ ವಾಹನಗಳನ್ನು ವ್ಯವಸ್ಥಿತವಾಗಿ ತಡೆದು ರೌಡಿಗಳಿಂದ ದರೋಡೆ ಮಾಡಿಸಲಾಗುತ್ತಿದೆ.ಇದು ಚುನಾವಣೆಗಾಗಿ ಮಾಡುತ್ತಿರುವ ಸಾವಿರ ಕೋಟಿ ರೂ ವಸೂಲಿ ಧಂದೆ ಎಂದು ಆರೋಪಿಸಿದ ಅವರು,ಈ ಚೆಕ್ ಪೋಸ್ಟ್ ಗಳನ್ನು ತಕ್ಷಣವೇ ಸರ್ಕಾರ ಬಂದ್ ಮಾಡಬೇಕು.ಮಾಡದೇ ಇದ್ದರೆ ಮುಂದಿನ ಹದಿನೈದು ದಿನಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಚೆಕ್ ಪೋಸ್ಟ್ ಗಳಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
Comments