200 ಕ್ಕೂ ಹೆಚ್ಚು ಮಂದಿಗೆ ಪವರ್ ಅವಾರ್ಡ್ ವಿತರಣೆ

30 Oct 2017 11:15 AM |
596 Report

ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪವರ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇಂಧನ ಇಲಾಖೆಯ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಇಲಾಖೆ ನೌಕರರು, ಉದ್ಯಮಿಗಳು, ಗ್ರಾಹಕರು, ಟರ್ನ್ ಕೀ ಏಜೆನ್ಸಿಗಳು, ರೈತರು ಎಲ್ಲರನ್ನು ಸ್ಮರಿಸಿ ಅವರನ್ನು ಗೌರವಿಸುವ ಕೆಲಸವನ್ನು ಇಲಾಖೆ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪವರ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಇಂಧನ ಇಲಾಖೆ ಯೋಜನೆಗಳ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು. ರಾಜ್ಯಸರ್ಕಾರ ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವುದನ್ನು ಅವರು ಶ್ಲಾಘಿಸಿದರು. ಆದರೂ ವಿದ್ಯುತ್ ಸ್ವಾವಲಂಬನೆ ಸಾಧಿಸುವಲ್ಲಿ ನಾವು ಯಶಸ್ಸು ಕಂಡಿದ್ದೇವೆ. ಇನ್ನಷ್ಟು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಅಗತ್ಯ ಕ್ರಮಕೈಗೊಂಡಿದ್ದೇವೆ. ದೇಶದಲ್ಲೇ ಅತಿ ದೊಡ್ಡದಾದ 2000 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದನೆ ಮಾಡುವ ಘಟಕವನ್ನು ಪಾವಗಡದ ಬಳಿ ನಿರ್ಮಾಣ ಮಾಡಲು 13 ಸಾವಿರ ಎಕರೆ ಪ್ರದೇಶದಲ್ಲಿ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ರೈತರಿಂದ ನಾವು ಯಾವುದೇ ಜಮೀನನ್ನು ಸ್ವಾಧೀನಪಡಿಸಿಕೊಂಡಿಲ್ಲ. ಬದಲಾಗಿ ಜಮೀನನ್ನು ಭೋಗ್ಯಕ್ಕೆ ಪಡೆದು ಪ್ರತಿವರ್ಷ ಜಮೀನಿಗೆ 21 ಸಾವಿರ ರೂ. ನೀಡಲಾಗುತ್ತದೆ. ಬರಡು ಭೂಮಿಯಲ್ಲಿ ಏನನ್ನೂ ಬೆಳೆಯದ ರೈತನಿಗೆ ಜೀವನಾಧಾರ ರೂಪಿಸುವ ಕಾರ್ಯ ಮಾಡಲಾಗಿದೆ ಎಂದರು. 

ಕಲ್ಲಿದ್ದಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪವನ್ನು ಅವರು ಮಾಡಿದರು. ರಾಜ್ಯದಲ್ಲಿ 44 ಸಾವಿರ ಲೈನ್‍ಮೆನ್‍ಗಳಿದ್ದು, ಅವರನ್ನು ಈಗ ಪವರ್‍ಮೆನ್‍ಗಳೆಂದು ಕರೆಯಲಾಗುತ್ತಿದೆ. ಅದು ಇಂಗ್ಲೀಷ್ ಪದವಾಗಿರುವುದರಿಂದ ಕನ್ನಡದಲ್ಲಿ ಶಕ್ತಿಮಿತ್ರ ಎಂದು ಕರೆಯುವುದು ಸೂಕ್ತ ಎಂಬ ಸಲಹೆ ನೀಡಿದರು.  ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ 3 ಸಾವಿರ ಮೆಗಾವ್ಯಾಟ್ ಥರ್ಮಲ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಉದ್ದಿಮೆದಾರರು ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ವಿವಿಧ ಮೂಲಗಳಿಂದ ಇನ್ನೂ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯವನ್ನು ಮತ್ತಷ್ಟು ವಿದ್ಯುತ್ ಸ್ವಾವಲಂಬಿ ಮಾಡಲಾಗುವುದು ಎಂದು ಹೇಳಿದರು. ಸಚಿವರಾದ ಕೆ.ಜೆ.ಜಾರ್ಜ್, ರೋಷನ್‍ಬೇಗ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಎಂ.ಆರ್.ಸೀತಾರಾಮ್, ಎಚ್.ಆಂಜನೇಯ, ಸಂಸದ ಡಿ.ಕೆ.ಸುರೇಶ್, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಅಧ್ಯಕ್ಷ ಶಂಕರಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

 

Edited By

dks fans

Reported By

dks fans

Comments